Select Your Language

Notifications

webdunia
webdunia
webdunia
webdunia

ಅಂದು ಚಿರು ಪುತ್ರಿ ಲವ್ ಮ್ಯಾರೇಜ್, ಇಂದು ಡೌರಿ ಕೇಸ್!

ಚಿರಂಜೀವಿ
ಹೈದರಾಬಾದ್ , ಮಂಗಳವಾರ, 15 ಮಾರ್ಚ್ 2011 (13:47 IST)
ಅಂದು ಹೆತ್ತವರನ್ನು ಧಿಕ್ಕರಿಸಿ ಪ್ರಿಯಕರ ಸಿರೀಶ್ ಭಾರದ್ವಾಜ್‌ನನ್ನು ಓಡಿ ಹೋಗಿ ಮದುವೆಯಾಗಿದ್ದ ಮೆಗಾಸ್ಟಾರ್ ಚಿರಂಜೀವಿ ಮುದ್ದಿನ ಕುವರಿ ಶ್ರೀಜಾ ಜೀವನ ಮತ್ತೊಂದು ತಿರುವು ಪಡೆದುಕೊಂಡಿದೆ. ತಾಳಿ ಕಟ್ಟಿದ ಗಂಡನ ವಿರುದ್ಧ ಶ್ರೀಜಾ ವರದಕ್ಷಿಣೆ ಪ್ರಕರಣ ದಾಖಲಿಸಿದ್ದಾಳೆ.

2007ರ ಅಕ್ಟೋಬರ್ 17ರಂದು ಹೈದರಾಬಾದಿನ ಆರ್ಯ ಸಮಾಜದಲ್ಲಿ ಇವರಿಬ್ಬರ ಮದುವೆ ನಡೆದಿತ್ತು. ಅಪ್ಪ ಚಿರಂಜೀವಿ ಸೇರಿದಂತೆ ಕುಟುಂಬದವರ ವಿರೋಧದ ನಡುವೆಯೂ ಅವರು ಪೊಲೀಸ್ ರಕ್ಷಣೆ ಪಡೆದು ಮದುವೆಯಾಗಿದ್ದರು. ಅಲ್ಲದೆ, ತಮಗೆ ಚಿರಂಜೀವಿ ಕುಟುಂಬದಿಂದ ಜೀವ ಬೆದರಿಕೆ ಇದೆ ಎಂದು ಹೈಕೋರ್ಟ್‌ಗೂ ಜೋಡಿ ಹೋಗಿತ್ತು.
WD

ಇಷ್ಟೆಲ್ಲ ಆವಾಂತರಗಳು ನಡೆದ ನಂತರ ಕೆಲ ವರ್ಷಗಳ ಹಿಂದಷ್ಟೇ ಚಾರ್ಟೆಡ್ ಅಕೌಂಟೆಂಟ್ ವಿದ್ಯಾರ್ಥಿನಿಯಾಗಿದ್ದ ಶ್ರೀಜಾ ಮತ್ತು ಸಿರೀಶ್ ಅವರನ್ನು ಚಿರಂಜೀವಿ ಮನೆಗೆ ಬರ ಮಾಡಿಕೊಂಡಿದ್ದರು. ಇದು ಮನೆಯೊಳಗಿನ ವಿಚಾರ, ಎಲ್ಲವೂ ಬಗೆಹರಿದಿದೆ ಎಂದು ಹೇಳಿದ್ದರು.

ಆದರೆ ಈಗ ನಾಟಕದ ಇನ್ನೊಂದು ದೃಶ್ಯ ಸರಿದಿದೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಗಂಡ ಸಿರೀಶ್ ಕಂಠಮಟ್ಟ ಕುಡಿಯುತ್ತಾನೆ, ಹಿಂಸೆ ನೀಡುತ್ತಾನೆ, ವರದಕ್ಷಿಣೆ ಬೇಡಿಕೆ ಇಡುತ್ತಿದ್ದಾನೆ ಎಂದು ಚಿರು ಪುತ್ರಿ ತಕರಾರು ತೆಗೆದಿದ್ದಾಳೆ.

ಹೈದರಾಬಾದಿನ ಸೆಂಟ್ರಲ್ ಕ್ರೈಮ್ ಸ್ಟೇಷನ್ (ಸಿಸಿಎಸ್) ಪೊಲೀಸರಿಗೆ ಸೋಮವಾರ ಶ್ರೀಜಾ ದೂರು ನೀಡಿದ್ದಾಳೆ.

ಪೊಲೀಸರು ಹೇಳುವ ಪ್ರಕಾರ, ಸಿರೀಶ್‌ಗೆ ಪ್ರೀತಿಯ ಜತೆ ಶ್ರೀಜಾ ಕೋಟ್ಯಂತರ ರೂಪಾಯಿಗಳನ್ನು ಕೊಟ್ಟಿದ್ದಾಳೆ. ಆದರೆ ಆತನ ಆಸೆ ತಣಿದಿಲ್ಲ. ಪ್ರತಿದಿನ ಕುಡಿಯುವುದು ಮತ್ತು ಹೆಂಡತಿಗೆ ಹಿಂಸೆ ನೀಡುವುದು ಆತನಿಗೆ ದಿನಚರಿಯಾಗಿ ಹೋಗಿದೆ. ಈಗ 1.5 ಕೋಟಿ ರೂಪಾಯಿ ಬೇಕು ಎಂದು ಪಟ್ಟು ಹಿಡಿದಿದ್ದಾನೆ. ಹಿಂಸೆ ಇನ್ನು ತಾಳಲಾಗದು ಎಂದು ಶ್ರೀಜಾ ಠಾಣೆಗೆ ಬಂದಿದ್ದಾಳೆ.

ಶ್ರೀಜಾ ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಎಸ್‌ನ ಮಹಿಳಾ ಪೊಲೀಸ್ ಠಾಣೆಯು, 498-A ಅಡಿಯಲ್ಲಿ (ವಿವಾಹಿತ ಮಹಿಳೆಗೆ ಹಿಂಸೆ) ಸಿರೀಶ್ ವಿರುದ್ಧ ಪ್ರಕರಣ ದಾಖಲಿಸಿದೆ. ಈಗಾಗಲೇ ಬಂಧನ ಕೂಡ ನಡೆದು ಹೋಗಿದೆ. ಆದರೆ ಅದನ್ನು ಇದುವರೆಗೆ ಮುಚ್ಚಿಡಲಾಗಿದೆ. ಸಿರೀಶ್ ಹೆತ್ತವರನ್ನು ಕೂಡ ಇದೇ ಸಂಬಂಧ ಬಂಧಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

ಶ್ರೀಜಾ-ಸಿರೀಶ್ ದಂಪತಿಗೆ ಎರಡೂವರೆ ವರ್ಷದ ಮಗಳಿದ್ದಾಳೆ.

Share this Story:

Follow Webdunia kannada