2ಜಿ ತರಂಗಾಂತರ ಹಂಚಿಕೆ, ಕಾಮನ್‌ವೆಲ್ತ್ ಗೇಮ್ಸ್ ಹಗರಣಗಳು ಕಳೆದ ಕೆಲವು ತಿಂಗಳುಗಳಿಂದ ಸಂಸತ್ತಿನಲ್ಲಿ ಭಾರೀ ಸದ್ದು ಮಾಡಿದವುಗಳು. ಈಗ ಇನ್ನೊಂದು ಹಗರಣ ಕಲಾಪದಲ್ಲಿ ಮಹತ್ವ ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಸಂಸದ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಭನ್ಸಾಲ್ ಅವರ ಹೆಸರು ಚಂಡೀಗಢ ಅಂಗಡಿ ಮಳಿಗೆಗಳ ಬಹುಕೋಟಿ ಹಗರಣದಲ್ಲಿ ಕೇಳಿ ಬಂದಿರುವುದು ಸಂಸತ್ತಿನಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿದೆ.
ಚಂಡೀಗಢ ವ್ಯಾಪಾರಿ ಮಳಿಗೆಗಳ ಅಕ್ರಮ ಹಂಚಿಕೆ ಹಗರಣದಲ್ಲಿ ಸಚಿವ ಭನ್ಸಾಲ್ ಅವರು ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಸದಸ್ಯರು, ಅವರ ರಾಜೀನಾಮೆಗೆ ಲೋಕಸಭೆಯಲ್ಲಿ ಇಂದು ಒತ್ತಾಯಿಸಿದರು. ಹಗರಣದ ತನಿಖೆಯಲ್ಲಿ ಭನ್ಸಾಲ್ ಹೆಸರು ಕೇಳಿ ಬಂದಿದೆ. ಈ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದೂ ಬಿಜೆಪಿ ಆಗ್ರಹಿಸಿತು.
ಆರೋಪ ನಿರಾಕರಿಸಿದ ಭನ್ಸಾಲ್...
ತನ್ನ ಮೇಲೆ ಬಂದಿರುವ ಆರೋಪಗಳನ್ನು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಚಿವ ಭನ್ಸಾಲ್ ತಳ್ಳಿ ಹಾಕಿದ್ದಾರೆ. ಇದು ನನ್ನ ಹೆಸರನ್ನು ಕೆಡಿಸಲು ಹೂಡಲಾಗಿರುವ ತಂತ್ರ ಎಂದು ಅವರು ಸ್ಪಷ್ಟನೆ ನೀಡಿದರು.
ನನ್ನ ಮೇಲಿನ ಆರೋಪಗಳಲ್ಲಿ ಕಿಂಚಿತ್ತಾದರೂ ನಿಜವಿದ್ದರೆ, ನಾನು ಯಾವತ್ತೂ ಸಂಸತ್ತಿಗೆ ಕಾಲಿಡುವುದಿಲ್ಲ ಎಂದು ಆಕ್ರೋಶದಿಂದ ನುಡಿದ ಭನ್ಸಾಲ್, ಕಾರ್ಪೊರೇಶನ್ ಚುನಾವಣೆಗಳ ಹಿನ್ನೆಲೆಯಲ್ಲಿ ಇಂತಹ ಹಾಸ್ಯಾಸ್ಪದ ಆರೋಪಗಳನ್ನು ಮಾಡಲಾಗುತ್ತಿದೆ ಎಂದರು.
ಬೀದಿ ವ್ಯಾಪಾರಿಗಳಿಗೆ 8x8 ಅಳತೆಯ ಮಳಿಗೆಗಳನ್ನು ಹಂಚಿಕೆ ಮಾಡುವಂತೆ ನಾನು ಪತ್ರಗಳನ್ನು ಬರೆದದ್ದು ಹೌದು ಎಂದು ಸಚಿವರು ಒಪ್ಪಿಕೊಂಡರು. ಈ ಬಗ್ಗೆ ಯಾವ ತನಿಖೆಯನ್ನು ಬೇಕಾದರೂ ನಡೆಸಿ. ನಾನು ಸಿದ್ಧನಿದ್ದೇನೆ. ನನ್ನ ಚಾರಿತ್ರ್ಯ ಶುದ್ಧವಾಗಿರಬೇಕು ಎಂದು ಬಯಸುತ್ತಿದ್ದೇನೆ. ಸಿಬಿಐ ತನಿಖೆಯೇ ನಡೆಯಲಿ ಎಂದು ಭಾವುಕರಾಗಿ ತಿಳಿಸಿದರು.
ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡು ಸದನದಲ್ಲಿ ಭಾರೀ ಕೋಲಾಹಲ ಏರ್ಪಟ್ಟಿದ್ದರಿಂದ ಸ್ಪೀಕರ್ ಮೀರಾ ಕುಮಾರ್ ಅವರು ಕಲಾಪವನ್ನು ಮುಂದೂಡಿದರು.
1989ರಲ್ಲಿ ಚಂಡೀಗಢದ ಬಜ್ವಾರಾ ಮಾರ್ಕೆಟ್‌ನ ಸೆಕ್ಟರ್ 22ರಲ್ಲಿ ಸಂಭವಿಸಿದ ಅಗ್ನಿ ಅನಾಹುತದ ಸಂತ್ರಸ್ತರಿಗಾಗಿ ಪರಿಹಾರದ ನಿಟ್ಟಿನಲ್ಲಿ ರಿಯಾಯಿತಿ ದರದಲ್ಲಿ ಚಿಕ್ಕ ವ್ಯಾಪಾರಿ ಮಳಿಗೆಗಳನ್ನು ಹಂಚುವ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿತ್ತು.