Publish Date: Tue, 13 Jun 2017 (11:21 IST)
Updated Date: Tue, 13 Jun 2017 (11:23 IST)
ಅಹಮ್ಮದಾಬಾದ್: ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮೇಲೆ ಯುವಕನೊಬ್ಬ ಬಳೆ ಎಸೆದು ವಂದೇ ಮಾತರಂ ಎಂದು ಘೋಷಣೆ ಕೂಗಿದ್ದಾನೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮೂರು ವರ್ಷ ಪೂರೈಸಿದ ಹಿನ್ನಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಚಿವೆ ಸ್ಮೃತಿ ಇರಾನಿ ಭಾಷಣ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಎದ್ದು ನಿಂತ ಯುವಕ ಮೂರು ಬಳೆ ಸಚಿವರತ್ತ ಎಸೆದ.
ಆದರೆ ಆತ ತುಂಬಾ ಹಿಂದಿನಿಂದ ಎಸೆದಿದ್ದರಿಂದ ಇದು ಸಚಿವರಿಗೆ ತಗುಲಲಿಲ್ಲ. ಆದರೆ ತಕ್ಷಣ ಆತನನ್ನು ಬಂಧಿಸಿದ ಪೊಲೀಸರು ಸಭಾಂಗಣದಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ. ಈತನನ್ನು ಕೇತನ್ ಕಸ್ವಾಲಾ ಎಂದು ಗುರುತಿಸಲಾಗಿದೆ.
ಈ ಘಟನೆ ಇದೀಗ ರಾಜಕೀಯ ತೆರವು ಪಡೆಯುತ್ತಿದ್ದು, ರಾಜ್ಯದಲ್ಲಿ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಈತ ಬಳೆ ಎಸೆದಿದ್ದಾನೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದು, ಆತ ಬಳೆ ಎಸೆಯುವಾಗ ವಂದೇ ಮಾತರಂ ಎಂದು ಮಾತ್ರ ಘೋಷಣೆ ಕೂಗಿದ್ದ ಎಂದಿದ್ದಾರೆ.