ನೋಯ್ಡಾ: ರಾಹುಲ್ ಗಾಂಧಿ ವಿರುದ್ಧ ವಿವಾದಾತ್ಮಕ ಪೋಸ್ಟ್ ಮಾಡಿದ್ದ ಯೂ ಟ್ಯೂಬರ್, ಪತ್ರಕರ್ತ ಅಜಿತ್ ಭಾರ್ತಿ ಅವರನ್ನು ಬಂಧಿಸಲು ಕರ್ನಾಟಕ ಪೊಲೀಸರು ನೋಯ್ಡಾಗೆ ಬಂದಿಳಿದಿದ್ದಾರೆ.
ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಜಿತ್ ಭಾರ್ತಿ ಮನೆ ಮುಂದೆ ಕರ್ನಾಟಕ ಪೊಲೀಸರು ಮಾರು ವೇಷದಲ್ಲಿ ಬಂದು ನಿಂತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಏನಿದು ಪ್ರಕರಣ ಇಲ್ಲಿದೆ ಮಾಹಿತಿ ನೋಡಿ.
ಅಜಿತ್ ಭಾರ್ತಿ ಎಂಬವರು ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿ ರಾಹುಲ್ ಗಾಂಧಿ ಮುಂದೆ ಅಧಿಕಾರಕ್ಕೆ ಬಂದ ಬಳಿಕ ರಾಮಮಂದಿರ ಜಾಗದಲ್ಲಿ ಬಾಬ್ರಿ ಮಸೀದಿ ನಿರ್ಮಿಸಲು ಬಯಸಿದ್ದಾರೆ ಎಂದು ಹೇಳಿದ್ದರು. ಅವರ ಈ ಹೇಳಿಕೆ ವಿರುದ್ಧ ಕರ್ನಾಟಕ ಕಾಂಗ್ರೆಸ್ ಘಟಕ ಇಲ್ಲಿನ ಪೊಲೀಸರಿಗೆ ದೂರು ನೀಡಿತ್ತು. ಅದರಂತೆ ಇಲ್ಲಿ ಎಫ್ ಐಆರ್ ಕೂಡಾ ದಾಖಲಾಗಿತ್ತು. ಇದೀಗ ತಮ್ಮನ್ನು ಬಂಧಿಸಲೆಂದು ಬಂದ ಕರ್ನಾಟಕ ಪೊಲೀಸರ ಬಗ್ಗೆ ಅಜಿತ್ ಭಾರ್ತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಮ್ಮ ಮನೆ ಮುಂದೆ ಕರ್ನಾಟಕ ಪೊಲೀಸರು ಎಂದು ಹೇಳಿಕೊಂಡು ಮೂವರು ಯುವಕರು ನೋಟಿಸ್ ನೀಡಲು ಬಂದಾಗ ಭಾರ್ತಿ ನೀವು ಇಲ್ಲಿನ ಪೊಲೀಸರಿಗೆ ಸೂಚನೆ ನೀಡಿದ್ದೀರಾ ಎಂದು ಕೇಳಿದೆ. ಅವರು ಇಲ್ಲವೆಂದಾಗ ತಾವೇ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದೆ. ತಕ್ಷಣವೇ ಬಂದ ಪೊಲೀಸರು ಕರ್ನಾಟಕ ಪೊಲೀಸರು ಎಂದು ಬಂದಿದ್ದ ಮೂವರು ಯುವಕರನ್ನು ಕರೆದೊಯ್ದಿದ್ದಾರೆ ಎಂದು ಭಾರ್ತಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.