Publish Date: Tue, 22 Sep 2015 (15:55 IST)
Updated Date: Tue, 22 Sep 2015 (15:59 IST)
ಮುಂಬೈ: ಮಂಬೈನಲ್ಲಿ 25 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಪಾನಮತ್ತಳಾಗಿ ಸಾರ್ವಜನಿಕ ಸ್ಥಳಗಳಲ್ಲಿ ದಾರಿಹೋಕರಿಗೆ ಮನಬಂದಂತೆ ದೂಷಿಸಿದ್ದಲ್ಲದೇ ಉಪನಗರದ ಎಂಐಡಿಸಿ ಪೊಲೀಸ್ ಠಾಣೆಯೊಳಗೆ ಗಲಾಟೆ ಮಾಡಿ ಸೀಸೆಯೊಳಗಿನ ಬಿಯರ್ ಗಂಟಲಿಗಿಳಿಸಿದ್ದಕ್ಕಾಗಿ ದಂಡ ವಿಧಿಸಲಾಯಿತು.
ಹೊಟೆಲ್ ಸ್ವಾಗತಕಾರಿಣಿಯಾಗಿದ್ದ ಸುನಿತಾ ಯಾದವ್ ಸೆ. 17ರಂದು ಕುಡಿದ ಮತ್ತಿನಲ್ಲಿ ಟ್ಯಾಕ್ಸಿ ಚಾಲಕನನ್ನು ವಾಚಾಮಗೋಚರವಾಗಿ ನಿಂದಿಸಿದರು. ಅವಳು ಚಾಲಕನನ್ನು ನಿಂದಿಸಿದ್ದಲ್ಲದೇ ದಾರಿಹೋಕರನ್ನು ಕೂಡ ನಿಂದಿಸತೊಡಗಿದಳು. ಚಾಲಕ ನೇರವಾಗಿ ಪೊಲೀಸ್ ಠಾಣೆಯ ಬಳಿ ಟ್ಯಾಕ್ಸಿಯನ್ನು ನಿಲ್ಲಿಸಿದ. ಅಲ್ಲೂ ಕೂಡ ತನ್ನ ಪ್ರತಾಪ ತೋರಿಸಿದ ಮಹಿಳಾಮಣಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತ ಪೊಲೀಸರಿಗೆ ಕೂಡ ರೋಪ್ ಹಾಕಿದಳು .
ಅವಳ ದುರ್ವತನೆಗೆ ಪೊಲೀಸರು 1200 ರೂ. ದಂಡ ವಸೂಲಿ ಮಾಡಿ ಕ್ಷಮಾಪಣೆ ಪತ್ರ ಬರೆಸಿಕೊಂಡ ಮೇಲೆ ಪೊಲೀಸ್ ಠಾಣೆಯಿಂದ ಹೊರಕ್ಕೆ ಹೋಗಲು ಅವಕಾಶ ನೀಡಲಾಯಿತು. ಪೊಲೀಸ್ ಠಾಣೆಯಲ್ಲಿ ಅವಳ ವರ್ತನೆಯನ್ನು ಪೊಲೀಸರೊಬ್ಬರು ವಿಡಿಯೋ ಮಾಡಿಕೊಂಡು ಫೇಸ್‌ಬುಕ್‌ನಲ್ಲಿ ಹರಿಯಬಿಟ್ಟಿದ್ದರು. ಈ ವಿಡಿಯೋದಲ್ಲಿ ಮಹಿಳೆ ಬಿಯರ್ ಸೀಸೆಗೆ ಬಾಯಿಯಿಟ್ಟು ಬಿಯರ್ ಹೀರುತ್ತಾ ಮೇಡಮ್, ನನ್ನ ಹೆಸರು ಸುನಿತಾ ಯಾದವ್, ನಾನು ಹರ್ಯಾಣಕ್ಕೆ ಸೇರಿದವಳು ಎಂದು ಹೇಳುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.