ಮೂರನೆಯ ಬಾರಿಗೂ ಹೆಣ್ಣು ಮಗು ಹುಟ್ಟಿತೆಂಬ ಬೇಸರದಲ್ಲಿ ಪಾಪಿ ತಾಯಿಯೋರ್ವಳು 26 ದಿನದ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದ ಹೇಯ ಘಟನೆ ಮಧ್ಯಪ್ರದೇಶದ ಬಾಲಘಾಟ್ ಪ್ರದೇಶದಲ್ಲಿ ನಡೆದಿದೆ.
ಜಿಲ್ಲೆಯ ಕಯಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಆರೋಪಿ ಮಹಿಳೆಯನ್ನು ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಆರೋಪಿ ರಾಖಿ ಅಲಿಯಾಸ್ ರಾಜೇಶ್ವರಿ (26) ಒಂದು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಈಗಾಗಲೇ ಎರಡು ಹೆಣ್ಣುಮಕ್ಕಳ ತಾಯಿಯಾಗಿದ್ದ ಆಕೆ ಮೂರನೆಯದಾದರೂ ಗಂಡಾಗುವುದೆಂಬ ನಿರೀಕ್ಷೆಯಲ್ಲಿದ್ದಳು. ಆದರೆ ಆಕೆಯ ನಿರೀಕ್ಷೆ ಹುಸಿಯಾದಾಗ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ. ಬಳಿಕ ಕೂಸನ್ನು ಬೆಕ್ಕು ಹೊತ್ತಿಕೊಂಡು ಹೋಗಿ ನೀರಿಗೆಸೆದಿದೆ ಎಂದು ಪರಿವಾರದವರ ಮುಂದೆ ಕಥೆ ಕಟ್ಟಿದ್ದಾಳೆ. ಆಕೆಯ ಮಾತನ್ನು ನಂಬಿದ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡದೆ ಜುಲೈ 24 ರಂದೇ ಮಗುವನ್ನು ಮಣ್ಣು ಮಾಡಿದ್ದರು.
ಘಟನೆಯ ಮಾಹಿತಿ ಪಡೆದ ಪೊಲೀಸರು ಮಣ್ಣು ಮಾಡಲಾಗಿದ್ದ ಮಗುವಿನ ಶವವನ್ನು ಎತ್ತಿ ನೋಡಲಾಗಿ ನೀರಿನಲ್ಲಿ ಮುಳುಗಿ ಮಗು ಸತ್ತಿರುವುದು ಸಾಬೀತಾಗಿದೆ. ಆದರೆ ಬೆಕ್ಕಿ ಹೊತ್ತಿಕೊಂಡ ಹೋಗಿದ್ದಕ್ಕೆ ಆಧಾರವಾಗಿ ದೇಹದ ಮೇಲೆ ಯಾವುದೇ ಗುರುತುಗಳಿರಲಿಲ್ಲ. ವಿಚಾರಣೆ ಕೈಗೊಂಡ ಪೊಲೀಸರಿಗೆ ಘಟನೆ ನಡೆದ ದಿನ ಮನೆಯಲ್ಲಿ ಮಹಿಳೆಯೋರ್ವಳೇ ಇದ್ದಿದ್ದು ಬೆಳಕಿಗೆ ಬಂದಿದೆ. ಆಕೆಯನ್ನು ತೀವ್ರ ವಿಚಾರಣೆಗೊಳಪಡಿಸಲಾಗಿ ಸತ್ಯವನ್ನಾಕೆ ಬಾಯ್ಬಿಟ್ಟಿದ್ದಾಳೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.