ನವದೆಹಲಿ: ಆಪರೇಷನ್ ಸಿಂದೂರ ನಡೆಸಿ ಭಾರತೀಯ ಸೇನೆ ಉಗ್ರರ ಮಾರಣಹೋಮ ನಡೆಸಿದ ಬಳಿಕ ಮಾಧ್ಯಮಗಳ ಮುಂದೆ ಬಂದಿರುವ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹೆಚ್ಚು ಮಾತನಾಡದೇ ಗಂಭೀರತೆ ಕಾಪಾಡಿದ್ದಾರೆ. ಇದನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ.
ನಿನ್ನೆ ಸರ್ವಪಕ್ಷಗಳ ಸಭೆ ಕರೆದಿರುವ ಬಗ್ಗೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರು ಮಾಧ್ಯಮಗಳ ಮುಂದೆ ಬಂದಿದ್ದರು. ಆಗ ಎಲ್ಲಾ ಕಾಂಗ್ರೆಸ್ ನಾಯಕರು ಗಂಭೀರವಾಗಿದ್ದರು.
ಮಾಧ್ಯಮಗಳ ಮುಂದೆಯೂ ರಾಹುಲ್ ಅಥವಾ ಕಾಂಗ್ರೆಸ್ ನಾಯಕರು ಹೆಚ್ಚಿನ ಪ್ರತಿಕ್ರಿಯೆ ನೀಡಿರಲಿಲ್ಲ. ನಮ್ಮ ಸೇನೆಯ ಬಗ್ಗೆ ಹೆಮ್ಮೆಯಿದೆ ಎಂದಷ್ಟೇ ಹೇಳಿದ್ದರು. ಇಂದು ಸರ್ವಪಕ್ಷ ಸಭೆ ಬಳಿಕವೂ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಸೇನೆಗೆ ನಮ್ಮ ಸಂಪೂರ್ಣ ಬೆಂಬಲವಿರಲಿದೆ ಎಂದಷ್ಟೇ ಹೇಳಿದ್ದರು. ಇತ್ತ ಮಲ್ಲಿಕಾರ್ಜುನ ಖರ್ಗೆ ಕೂಡಾ ಅದೇ ಮಾತನ್ನು ಹೇಳಿದ್ದಾರೆ. ಸಾಕಷ್ಟು ವಿಷಯಗಳಿವೆ. ಅದನ್ನು ಯಾವುದನ್ನೂ ಈಗ ಮಾಧ್ಯಮಗಳ ಮುಂದೆ ಹೇಳಲಾಗುವುದಿಲ್ಲ ಎಂದು ಮುನ್ನಡೆದಿದ್ದಾರೆ.
ಕಾಂಗ್ರೆಸ್ ನಾಯಕರು ಈ ಮಟ್ಟಿಗೆ ಗಂಭೀರವಾಗಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಟ್ರೋಲ್ ಮಾಡಿದ್ದಾರೆ. ಈ ನಾಯಕರು ಯಾಕೆ ಏನೋ ಆದವರಂತೆ ಇಷ್ಟು ಗಂಭೀರವಾಗಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ದೇಶದಲ್ಲಿ ಈಗ ಸೂಕ್ಷ್ಮ ಸನ್ನಿವೇಶವಿದೆ. ಈ ಸಂದರ್ಭದಲ್ಲಿ ಅನಗತ್ಯ ಹೇಳಿಕೆಗಳನ್ನು ನೀಡಿ ವಿವಾದವಾಗುವುದು ಬೇಡ ಎಂಬ ಕಾರಣಕ್ಕೆ ವಿಪಕ್ಷ ನಾಯಕರು ಹೆಚ್ಚು ಪ್ರತಿಕ್ರಿಯೆ ನೀಡುತ್ತಿಲ್ಲ. ಆದರೆ ಇದನ್ನೇ ಕೆಲವರು ಅಪಾರ್ಥ ಮಾಡಿಕೊಂಡಿದ್ದಾರೆ.