ಮುಂಬೈ: ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಅಂತರದಿಂದ ಗೆದ್ದು ಅಧಿಕಾರಕ್ಕೇರಿದರೂ ಮಹಾಯುತಿ ವಿಕಾಸ್ ಮೈತ್ರಿಕೂಟದಲ್ಲಿ ಸಿಎಂ ಸ್ಥಾನದ ಕುರಿತು ಒಮ್ಮತ ಮೂಡಿಲ್ಲ.
ಸಿಎಂ ಸ್ಥಾನಕ್ಕಾಗಿ ಏಕನಾಥ ಶಿಂಧೆ ಮತ್ತು ದೇವೇಂದ್ರ ಫಡ್ನವಿಸ್ ನಡುವೆ ತಿಕ್ಕಾಟ ಮುಂದುವರಿದಿದೆ. ಇದುವರೆಗೆ ಶಿವಸೇನೆಯ ಏಕನಾಥ್ ಶಿಂದೆಯವರೇ ಮುಖ್ಯಮಂತ್ರಿಯಾಗಿದ್ದರು. ಆದರೆ ಈಗ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಗೆ ಸಿಎಂ ಸ್ಥಾನ ಸಿಗಬೇಕು ಎಂದು ಬಿಜೆಪಿಯ ಬೇಡಿಕೆಯಾಗಿದೆ. ಆದರೆ ಶಿಂಧೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ತಯಾರಿಲ್ಲ.
ಫಡ್ನವಿಸ್ ಗೆ ಮುಖ್ಯಮಂತ್ರಿ ಪಟ್ಟ ನೀಡುವಂತೆ ಆರ್ ಎಸ್ಎಸ್ ಒತ್ತಡವಿದೆ. ಆದರೆ ಶಿಂಧೆ ಬಣದ ಸದಸ್ಯರು ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ಫಡ್ನವಿಸ್ ನೇತೃತ್ವದಲ್ಲಿ ಬಿಜೆಪಿ ಈ ಬಾರಿ 131 ಸ್ಥಾನಗಳನ್ನು ಗೆದ್ದಿದೆ. ಅತೀ ಹೆಚ್ಚು ಶಾಸಕರ ಬೆಂಬಲ ಅವರಿಗಿದೆ. ಹೀಗಾಗಿ ಅವರಿಗೇ ಸಿಎಂ ಸ್ಥಾನ ನೀಡಬೇಕು ಎಂಬುದು ಅವರ ಬೆಂಬಲಿಗರ ಒತ್ತಾಸೆಯಾಗಿದೆ.
ಇತ್ತ ಶಿಂಧೆ ಈ ಹಿಂದೆ ಜಾರಿಗೆ ತಂದಿದ್ದ ಜನಪ್ರಿಯ ಯೋಜನೆಗಳಿಂದಲೇ ಈಗ ಮಹಾರಾಷ್ಟ್ರದಲ್ಲಿ ಮತ್ತೆ ಮಹಾಯುತಿ ಅಧಿಕಾರಕ್ಕೇರಿದೆ. ಅವರಿಗೆ ಒಟ್ಟು 57 ಶಾಸಕರ ಬೆಂಬಲವಿದೆ. ಈ ಕಾರಣಕ್ಕೆ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬುದು ಅವರ ಬೆಂಬಲಿಗರ ಅಭಿಪ್ರಾಯ. ಇಂದು ಮಹಾ ಮುಂದಿನ ಸಿಎಂ ಕುತೂಹಲಕ್ಕೆ ತೆರೆ ಬೀಳುವ ನಿರೀಕ್ಷೆಯಿದೆ.