ಹರಿಯಾಣಾದ ಮೇವತ್ ಜಿಲ್ಲೆಯ ಅಖ್ಲಿಮ್‌ಪುರ್ ಗ್ರಾಮದ ನಿವಾಸಿಯಾದ ಮೊಹಮ್ಮದ್, ಕಳೆದ 2020ರಿಂದ ಪಂಚಾಯಿತಿಯ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದಾನೆ. ಆದರೆ, ಇದೀಗ ಸೀಟು ಮಹಿಳೆಯರಿಗೆ ಮೀಸಲಾಗಿದ್ದರಿಂದ ಚುನಾವಣೆಗೆ ಸ್ಪರ್ಧಿಸಲು ಅನರ್ಹನಾಗಿದ್ದಾನೆ. ಆದರೆ ಕಣಕ್ಕಿಳಿಸಲೇ ಬೇಕು ಎನ್ನುವ ಏಕೈಕ ಕಾರಣಕ್ಕೆ ಎರಡನೇ ವಿವಾಹವಾಗಿ ಅಚ್ಚರಿ ಮೂಡಿಸಿದ್ದಾನೆ.
ಮುಂಬರುವ ಪಂಚಾಯಿತಿ ಚುನಾವಣೆಯಲ್ಲಿ ಕಣಕ್ಕಿಳಿಸಬೇಕು ಎನ್ನುವ ಏಕೈಕ ಕಾರಣದಿಂದಾಗಿ 47 ವರ್ಷ ವರ್ಷ ವಯಸ್ಸಿನ ದೀನ್ ಮೊಹಮ್ಮದ್ ಎನ್ನುವ 8 ಮಕ್ಕಳ ತಂದೆ, 23 ವರ್ಷದ ಮಹಿಳೆಯನ್ನು ವಿವಾಹವಾದ ಅಚ್ಚರಿಯ ಘಟನೆ ವರದಿಯಾಗಿದೆ.
ಮತ್ತೆ ಪಂಚಾಯಿತಿ ಅಧ್ಯಕ್ಷ ಸ್ಥಾನ ದಕ್ಕಿಸಿಕೊಳ್ಳಬೇಕು ಎನ್ನುವ ಆಸೆಯಿಂದ ಮೊದಲ ಪತ್ನಿಯನ್ನು ಕಣಕ್ಕಿಳಿಸಲು ಪ್ರಯತ್ನಿಸಿದ್ದಾನೆ. ಆದರೆ ಹೊಸ ಕಾನೂನಿನ ಪ್ರಕಾರ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದಲ್ಲಿ ಕನಿಷ್ಠ 8ನೇ ತರಗತಿ ಪಾಸಾಗಿರಬೇಕು, ಮೊದಲ ಪತ್ನಿ ಅನಕ್ಷರಸ್ಥೆಯಾಗಿದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಿಲ್ಲ.
ನಂತರ ತನ್ನ ಸೋದರ ಸೊಸೆಯನ್ನು ಕಣಕ್ಕಿಳಿಸಲು ಪ್ರಯತ್ನಿಸಿದ್ದಾನೆ. ಆದರೆ ವಯೋಮಿತಿ ಗುರಿಯನ್ನು ತಲುಪಲು ಆಕೆ ವಿಫಲವಾಗಿದ್ದಾಳೆ. ದಾರಿ ಕಾಣದ ಮೊಹಮ್ಮದ್ ಚುನಾವಣೆಗೆ ಸ್ಪರ್ಧಿಸಲು ಅರ್ಹತೆಯಿರುವ 8ನೇ ತರಗತಿ ಪಾಸಾದ ಸಾಜಿದಾ ಎನ್ನುವ ಯುವತಿಯನ್ನು ವಿವಾಹವಾಗಿದ್ದಾನೆ.
ಮೊಹಮ್ಮದ್ ಗ್ರಾಮಸ್ಥರ ಬೆಂಬಲದಿಂದಾಗಿ ತುಂಬಾ ಪ್ರಭಾವಶಾಲಿ ವ್ಯಕ್ತಿಯಾಗಿದ್ದು, ಮುಂಬರುವ ಚುನಾವಣೆಯಲ್ಲೂ ಜಯಗಳಿಸುವ ಆತ್ಮವಿಶ್ವಾಸ ಹೊಂದಿದ್ದಾನೆ. ಮತ್ತೆ ಪಂಚಾಯಿತಿ ಅಧ್ಯಕ್ಷನಾಗಬೇಕು ಎನ್ನುವ ಕನಸಿಗೆ ಹೊಸ ಕಾನೂನು ಕೊಡಲಿ ಪೆಟ್ಟು ನೀಡಿದೆ.
ನನ್ನ ತಾಯಿ ಕೂಡಾ 2000 ರಿಂದ 2005ರವರೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದರು. ನಾನು ಕೂಡಾ 2020ರಿಂದ 2022ರವರೆಗೆ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಎರಡನೇ ಪತ್ನಿ ಕೂಡಾ ಜಯಗಳಿಸುತ್ತಾಳೆ ಎನ್ನುವ ವಿಶ್ವಾಸವಿದೆ ಎಂದು ದೀನ್ ಮೊಹಮ್ಮದ್ ತಿಳಿಸಿದ್ದಾನೆ.