Publish Date: Mon, 27 Jul 2026 (10:57 IST)
Updated Date: Mon, 27 Jul 2026 (11:05 IST)
ನವದೆಹಲಿ: ಪರೀಕ್ಷಾ ಅಕ್ರಮ ತಡೆಯಲು ಪ್ರಧಾನಿ ಮೋದಿ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆ ನಂತರ ಎಚ್ಚೆತ್ತುಕೊಂಡ ಪ್ರಧಾನಿ ಮೋದಿ ಹೊಸದೊಂದು ಟಾಸ್ಕ್ ಫೋರ್ಸ್ ಸ್ಥಾಪನೆ ಮಾಡಿದ್ದಾರೆ.
ಈ ಕಮಿಟಿಯಲ್ಲಿರುವ ಒಬ್ಬೊಬ್ಬರೂ ತಮ್ಮದೇ ಫೀಲ್ಡ್ ನಲ್ಲಿ ಜಗಜಟ್ಟಿಗಳೇ ಎನ್ನಬಹುದು. ಯಾವುದೇ ರಾಜಕೀಯ ಹಿನ್ನಲೆಯಿಲ್ಲದ, ತಮ್ಮದೇ ಆದ ವೃತ್ತಿಯಲ್ಲಿ ತಜ್ಞರೆನಿಸಿಕೊಂಡವರ ಪಡೆಯನ್ನು ಮೋದಿ ರಚಿಸಿದ್ದಾರೆ. ಈ ಮೂಲಕ ಯಾರೂ ಈ ವಿಚಾರವಾಗಿ ಸೊಲ್ಲೆತ್ತದಂತೆ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ. ಈ ಕಮಿಟಿಯಲ್ಲಿರುವ ಪ್ರತಿಯೊಬ್ಬರ ಹಿನ್ನಲೆ ಇಲ್ಲಿದೆ ನೋಡಿ.
ನಂದನ್ ನೀಲೇಕಣಿ
ಮೂಲತಃ ಕನ್ನಡಿಗರಾದ ಇವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆಯಾಗಿದೆ. ಇವರು ಇನ್ ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರು. ಭಾರತದಲ್ಲಿ ಡಿಜಿಟಲ್ ವ್ಯವಸ್ಥೆ ತರಲು ಇವರ ಕೊಡುಗೆ ಸಾಕಷ್ಟಿದೆ. ಅಷ್ಟೇ ಏಕೆ, ಯುಪಿಎ ಅಧಿಕಾರದಲ್ಲಿದ್ದಾಗ ಆಧಾರ್ ಕಾರ್ಡ್ ಪರಿಚಯಿಸಲಾಗಿತ್ತು. ಆಧಾರ್ ಕಾರ್ಡ್ ಯೋಜನೆಯನ್ನು ವಿನ್ಯಾಸಗೊಳಿಸಿದವರೇ ನಂದನ್ ನೀಲೇಕಣಿ. ಅಷ್ಟೇ ಅಲ್ಲ, ಭಾರತದಲ್ಲಿ ಇಂದು ಜನಪ್ರಿಯವಾಗಿರುವ ಯುಪಿಐ ವ್ಯವಸ್ಥೆ ರೂಪಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಜೊತೆಗೂಡಿ ಕೆಲಸ ಮಾಡಿದ್ದರು. ಸಣ್ಣ ವ್ಯಾಪಾರಿಗಳಿಗೆ ನೆರವಾಗುವ ಡಿಜಿಟಲ್ ಕಾಮರ್ಸ್ ಹಾಗೂ ಡಿಜಿಟಲ್ ಸಾಲ ಸೌಲಭ್ಯಗಳಿಗೆ ಮಾರ್ಗದರ್ಶಕರಾಗಿದ್ದರು. ಒಟ್ಟಿನಲ್ಲಿ ಡಿಜಿಟಲ್ ಎಕ್ಸ್ ಪರ್ಟ್ ಎನ್ನಬಹುದು.
ಎಸ್ ಸೋಮನಾಥ್
ಶ್ರೀಧರ ಪಣಿಕರ್ ಸೋಮನಾಥ್ ಅವರು ಭಾರತದ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO - ಇಸ್ರೋ) ಮಾಜಿ ಅಧ್ಯಕ್ಷರು. ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಹೊಸ ಎತ್ತರಕ್ಕೇರಲು ಮತ್ತು ಇತಿಹಾಸ ಸೃಷ್ಟಿಸಲು ಇವರ ನಾಯಕತ್ವ ಹಾಗೂ ತಾಂತ್ರಿಕ ದೂರದೃಷ್ಟಿ ಪ್ರಮುಖ ಕಾರಣವಾಗಿದೆ. 2023 ರಲ್ಲಿ ಚಂದ್ರನ ದಕ್ಷಿಣ ಧ್ರುವದ ಮೇಲೆ ನೌಕೆಯನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಸೋಮನಾಥ್ ಅವರ ನೇತೃತ್ವದಲ್ಲಿ ನಡೆದ ಈ ಯೋಜನೆ ಇಸ್ರೋದ ಬೃಹತ್ ಸಾಧನೆಯಾಗಿದೆ. ಎಸ್. ಸೋಮನಾಥ್ ಅವರು ಇಸ್ರೋ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಭಾರತವು ಜಗತ್ತೇ ಹುಬ್ಬೇರಿಸುವಂತಹ ಹಲವು ಮಹತ್ವದ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.
ತಪನ್ ದೇಖಾ
ತಪನ್ ಕುಮಾರ್ ದೇಕಾ ಅವರು ಭಾರತದ ಅತ್ಯುನ್ನತ ಮತ್ತು ಪ್ರಭಾವಿ ಆಂತರಿಕ ಗುಪ್ತಚರ ಸಂಸ್ಥೆಯಾದ ಇಂಟೆಲಿಜೆನ್ಸ್ ಬ್ಯೂರೋ ನ ಪ್ರಸ್ತುತ ನಿರ್ದೇಶಕರು. ಇವರು 1988 ರ ಹಿಮಾಚಲ ಪ್ರದೇಶ ಕೇಡರ್‌ನ ಹಿರಿಯ ಭಾರತೀಯ ಪೊಲೀಸ್ ಸೇವೆ ಅಧಿಕಾರಿಯಾಗಿದ್ದಾರೆ. ಭಾರತದ ಆಂತರಿಕ ಭದ್ರತೆ, ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳು ಮತ್ತು ಈಶಾನ್ಯ ಭಾರತದ ಉಗ್ರಗಾಮಿ ಸಮಸ್ಯೆಗಳನ್ನು ಹತೋಟಿಗೆ ತರುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ತಪನ್ ದೇಕಾ ಅವರು ಇಂಟೆಲಿಜೆನ್ಸ್ ಬ್ಯೂರೋದ ಕೌಂಟರ್-ಟೆಂರರಿಸಮ್ ವಿಭಾಗದ ಮುಖ್ಯಸ್ಥರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. 2008 ರ ಮುಂಬೈ 26/11 ದಾಳಿಯ ನಂತರದ ತನಿಖೆ ಮತ್ತು ಇಂಡಿಯನ್ ಮುಜಾಹಿದ್ದೀನ್ ಜಾಲವನ್ನು ಧ್ವಂಸಗೊಳಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಮೂಲತಃ ಅಸ್ಸಾಂ ರಾಜ್ಯದವರಾದ ಇವರು, ಈಶಾನ್ಯ ಭಾರತದಲ್ಲಿ ಎನ್‌ಎಸ್‌ಸಿಎನ್ ಮತ್ತು ಉಲ್ಫಾ ನಂತಹ ಉಗ್ರಗಾಮಿ ಸಂಘಟನೆಗಳ ನಿಗ್ರಹ ಹಾಗೂ ಶಾಂತಿ ಮಾತುಕತೆಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ.
ಪ್ರೊ ವಿ ಕಾಮಕೋಟಿ
ಪ್ರೊಫೆಸರ್ ವೀಝಿನಾತನ್ ಕಾಮಕೋಟಿ ಅವರು ಭಾರತದ ಖ್ಯಾತ ಗಣಕ ವಿಜ್ಞಾನಿ ಹಾಗೂ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಯಾದ ಐಐಟಿ ಮದ್ರಾಸ್ ನ ನಿರ್ದೇಶಕರು. ಭಾರತವು ಸೆಮಿಕಂಡಕ್ಟರ್ ಮತ್ತು ಕಂಪ್ಯೂಟರ್ ಹಾರ್ಡ್‌ವೇರ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಮತ್ತು 'ಮೇಕ್ ಇನ್ ಇಂಡಿಯಾ' ತಂತ್ರಜ್ಞಾನವನ್ನು ಪ್ರೋತ್ಸಾಹಿಸಲು ಇವರು ನೀಡಿರುವ ಕೊಡುಗೆ ಅಪಾರ. ಪ್ರೊ. ವಿ. ಕಾಮಕೋಟಿ ಅವರ ಅತ್ಯಂತ ಪ್ರಸಿದ್ಧ ಮತ್ತು ಹೆಮ್ಮೆಯ ಸಾಧನೆ ಎಂದರೆ ಭಾರತದ ಪ್ರಥಮ ಸ್ವದೇಶಿ ನಿರ್ಮಿತ ಮೈಕ್ರೋಪ್ರೊಸೆಸರ್ 'ಶಕ್ತಿ' ಯೋಜನೆಯನ್ನು ಮುನ್ನಡೆಸಿದ್ದು. ಐಐಟಿ ಮದ್ರಾಸ್‌ನ ಸಂಶೋಧಕರ ತಂಡದೊಂದಿಗೆ ಸೇರಿ ಇವರು ವಿನ್ಯಾಸಗೊಳಿಸಿದ 'ಶಕ್ತಿ' ಪ್ರೊಸೆಸರ್, ಭಾರತಕ್ಕೆ ವಿದೇಶಿ ಚಿಪ್‌ಗಳ ಮೇಲಿದ್ದ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡಿತು. ಇವರು ಭಾರತದ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ದೇಶದ ಡಿಜಿಟಲ್ ಭದ್ರತೆ ಮತ್ತು ಸೈಬರ್ ಸೆಕ್ಯುರಿಟಿ ನೀತಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ರಚಿಸಿದ್ದ AI ಟಾಸ್ಕ್ ಫೋರ್ಸ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಅನಿತಾ ಕರ್ವಾಲ್
ಅನಿತಾ ಕರ್ವಾಲ್ ಅವರು ಗುಜರಾತ್ ಕೇಡರ್‌ನ 1988 ರ ಬ್ಯಾಚ್‌ನ ಹಿರಿಯ ಭಾರತೀಯ ಆಡಳಿತ ಸೇವೆ (IAS) ಅಧಿಕಾರಿಯಾಗಿದ್ದು, ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳನ್ನು ತಂದ ಪ್ರಮುಖ ಆಡಳಿತಗಾರರಲ್ಲಿ ಒಬ್ಬರಾಗಿದ್ದಾರೆ. ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ವಿಭಾಗದ ಕಾರ್ಯದರ್ಶಿಯಾಗಿ ಹಾಗೂ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ (CBSE - ಸಿಬಿಎಸ್‍ಇ) ಅಧ್ಯಕ್ಷೆಯಾಗಿ ಇವರು ಸಲ್ಲಿಸಿದ ಸೇವೆ ಅತ್ಯಂತ ಸ್ಮರಣೀಯವಾದದ್ದು. 2017 ರಿಂದ 2020 ರವರೆಗೆ ಸಿಬಿಎಸ್‍ಇ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದರು. ಇವರ ಅವಧಿಯಲ್ಲಿ ಪರೀಕ್ಷಾ ಪದ್ಧತಿಗಳಲ್ಲಿ ಪಾರದರ್ಶಕತೆ ತರಲು, ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. 2020 ರಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ವಿಭಾಗದ ಕಾರ್ಯದರ್ಶಿಯಾಗಿ ನೇಮಕಗೊಂಡರು. ಭಾರತದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವಲ್ಲಿ ಮತ್ತು ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಡಿಜಿಟಲ್ ಶಿಕ್ಷಣವನ್ನು ದೇಶಾದ್ಯಂತ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಮೃತ್ ಲಾಲ್ ಮೀನಾ
ಅಮೃತ್ ಲಾಲ್ ಮೀನಾ ಅವರು ಬಿಹಾರ ಕೇಡರ್‌ನ 1989 ರ ಬ್ಯಾಚ್‌ನ ಹಿರಿಯ ಭಾರತೀಯ ಆಡಳಿತ ಸೇವೆ (IAS) ಅಧಿಕಾರಿಯಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರಲ್ಲೂ ಹಲವು ಪ್ರಮುಖ ಸಚಿವಾಲಯಗಳ ಉನ್ನತ ಹುದ್ದೆಗಳನ್ನು ನಿಭಾಯಿಸಿರುವ ಇವರು ದಕ್ಷ ಆಡಳಿತಕ್ಕೆ ಹೆಸರುವಾಸಿಯಾಗಿದ್ದಾರೆ.ಕೇಂದ್ರ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿಯಾಗಿ ಮತ್ತು ಬಿಹಾರದ ಮುಖ್ಯ ಕಾರ್ಯದರ್ಶಿಯಾಗಿ ಇವರು ಸಲ್ಲಿಸಿದ ಸೇವೆ ಅತ್ಯಂತ ಮಹತ್ವದ್ದಾಗಿದೆ. 2022 ರಿಂದ 2024 ರವರೆಗೆ ಕೇಂದ್ರ ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ದೇಶದಲ್ಲಿ ಕಲ್ಲಿದ್ದಲು ಅಭಾವ ಉಂಟಾಗದಂತೆ ತಡೆಯಲು ಮತ್ತು ವಿದ್ಯುತ್ ಉತ್ಪಾದನೆಗೆ ಅಗತ್ಯವಾದ ಕಲ್ಲಿದ್ದಲು ಪೂರೈಕೆಯನ್ನು ಸರಿಪಡಿಸಲು ಪ್ರಮುಖ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಂಡರು. ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ಮತ್ತು ಕಮರ್ಷಿಯಲ್ ಮೈನಿಂಗ್ ಉತ್ತೇಜಿಸಲು ಇವರು ಕೆಲಸ ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ 'ಪಿಎಂ ಗತಿ ಶಕ್ತಿ' ಮೂಲಸೌಕರ್ಯ ಯೋಜನೆಯ ವಿನ್ಯಾಸ ಮತ್ತು ಜಾರಿಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. 2024 ರಲ್ಲಿ ಕೇಂದ್ರ ಸೇವೆಯಿಂದ ತಮ್ಮ ಮೂಲ ಕೇಡರ್‌ಗೆ ಮರಳಿದ ನಂತರ, ಬಿಹಾರ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ