ಚಂಡೀಗಢ : ಹರಿಯಾಣದ ಮೇವತ್ ಪ್ರದೇಶದ ನಂದ್ಗ್ರಾಮ್ನಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದ್ದು, ಗಲಭೆ ತೀವ್ರ ಸ್ವರೂಪ ಪಡೆದು ಹಿಂಸಾಚಾರಕ್ಕೆ ತಿರುಗಿದೆ.
ಈ ವೇಳೆ ಕಲ್ಲು ಎಸೆದು ಕಾರುಗಳಿಗೆ ಬೆಂಕಿ ಹಚ್ಚಿದ ಗುಂಪೊಂದು ಗುಂಡು ಹಾರಿಸಿ ಇಬ್ಬರು ಹೋಮ್ ಗಾರ್ಡ್ಗಳನ್ನ ಹತ್ಯೆ ಮಾಡಿದ್ದಾರೆ. ಅಲ್ಲದೇ 7 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಕಿಡಿಗೇಡಿಗಳು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ಗುರುಗ್ರಾಮದಿಂದ ಶೋಭಾಯಾತ್ರೆಯನ್ನ ಆರಂಭಿಸಿದ್ದರು. ಮೆರವಣಿಗೆ ನಂದ್ಗ್ರಾಮ ಸಮೀಪಿಸುತ್ತಿದ್ದಂತೆ ಅನ್ಯಕೋಮಿನ ಕೆಲವರು ಯಾತ್ರೆಯನ್ನ ತಡೆದು ಕಲ್ಲು ತೂರಾಟ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಸಂಘರ್ಷ ಏರ್ಪಟ್ಟಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಭಾರೀ ಹಿಂಸಾಚಾರ ಏರ್ಪಟ್ಟಿರುವುದರಿಂದ ಸುಮಾರು 2,500 ಪುರುಷರು, ಮಹಿಳೆಯರು ಮತ್ತು ಮಕ್ಕಳು ಗುರುಗ್ರಾಮ್ ಬಳಿಯ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದಾರೆ.