ಇಂಫಾಲ : ಜನಾಂಗೀಯ ಘರ್ಷಣೆ ನಡೆಯುತ್ತಿರುವ ಮಣಿಪುರದಲ್ಲಿ ಸರ್ಕಾರ ಬುಧವಾರ ರಾಜ್ಯಾದ್ಯಂತ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಜುಲೈ 10 ರವರೆಗೆ ವಿಸ್ತರಿಸಿದೆ.
ಮಣಿಪುರ ಗೃಹ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಜೀವಹಾನಿ, ಸಾರ್ವಜನಿಕ, ಖಾಸಗಿ ಆಸ್ತಿಗಳಿಗೆ ಹಾನಿ ಮತ್ತು ಸಾರ್ವಜನಿಕರ ನೆಮ್ಮದಿಗೆ ವ್ಯಾಪಕ ಭಂಗವನ್ನು ತಡೆಗಟ್ಟಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.
ಮಣಿಪುರದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾರ್ವಜನಿಕರನ್ನು ಹಿಂಸಾಚಾರಕ್ಕೆ ಪ್ರಚೋದಿಸುವ ಚಿತ್ರಗಳು, ದ್ವೇಷದ ಭಾಷಣ ಮತ್ತು ದ್ವೇಷದ ವೀಡಿಯೊ ಸಂದೇಶಗಳನ್ನು ಪ್ರಸಾರ ಮಾಡಲು ಸಾಮಾಜಿಕ ಜಾಲತಾಣಗಳನ್ನು ವ್ಯಾಪಕವಾಗಿ ಬಳಸುವ ಸಾಧ್ಯತೆಯಿದೆ. ಈ ಹಿನ್ನೆಲೆ ಇಂಟರ್ನೆಟ್ ಸ್ಥಗಿತವನ್ನು ವಿಸ್ತರಿಸಲಾಗಿದೆ. ಈ ಅಮಾನತು ಜುಲೈ 10 ಮಧ್ಯಾಹ್ನ 3:00 ಗಂಟೆಯವರೆಗೆ ಜಾರಿಯಲ್ಲಿರಲಿದೆ.
ಮೇ 3ರಂದು ಮಣಿಪುರದಾದ್ಯಂತ ಪ್ರಾರಂಭವಾದ ಹಿಂಸಾಚಾರದಿಂದಾಗಿ 2 ತಿಂಗಳಿಗೂ ಹೆಚ್ಚು ದಿನಗಳ ಕಾಲ ಶಾಲೆಗಳನ್ನು ಮುಚ್ಚಲಾಗಿತ್ತು. ಬುಧವಾರದಿಂದ 1-8ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಮತ್ತೆ ತೆರೆಯಲಾಗಿದೆ.