Publish Date: Sat, 18 Jul 2026 (16:22 IST)
Updated Date: Sat, 18 Jul 2026 (16:28 IST)
ನವದೆಹಲಿ: ರಾಜಧಾನಿ ದೆಹಲಿಯ ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲಿ ಶನಿವಾರ ತೀವ್ರ ಗದ್ದಲ ಏರ್ಪಟ್ಟಿದೆ. 'ಕಾಕ್ರೋಚ್ ಜನತಾ ಪಾರ್ಟಿ' ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ಅಪರಿಚಿತ ಮಹಿಳೆಯೊಬ್ಬರು ಅವರ ಮೇಲೆ ಹಠಾತ್ ಆಗಿ ನೀಲಿ ಬಣ್ಣದ ಶಾಯಿಯನ್ನು ಎರಚಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಆ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ನೀಟ್ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಜಂತರ್ ಮಂತರ್‌ನಲ್ಲಿ ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಸಿದ್ಧ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ಶನಿವಾರ ಮುಂಜಾನೆ ದೆಹಲಿ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ: ವಾಂಗ್ಚುಕ್ ಅವರ ಬಂಧನವನ್ನು ಖಂಡಿಸಿ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಜಂತರ್ ಮಂತರ್‌ನಲ್ಲಿ ತಾವೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸುವುದಾಗಿ ಘೋಷಿಸಿದ್ದರು.
ವೇದಿಕೆ ಮೇಲೆಯೇ ದಾಳಿ: ದಿಪ್ಕೆ ಅವರು ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ಗುಂಪಿನಿಂದ ನುಗ್ಗಿ ಬಂದ ಮಹಿಳೆಯೊಬ್ಬರು ಘೋಷಣೆಗಳನ್ನು ಕೂಗುತ್ತಾ ಅವರ ಮುಖ ಮತ್ತು ಬಟ್ಟೆಯ ಮೇಲೆ ಶಾಯಿ ಎಸೆದರು. ಇದರಿಂದ ಕೆಲಕಾಲ ವೇದಿಕೆ ಬಳಿ ಭಾರಿ ಗೊಂದಲ ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಯಿತು.
ಶಾಯಿ ದಾಳಿಯ ಬಳಿಕವೂ ಧೃತಿಗೆಡದ ಅಭಿಜೀತ್ ದಿಪ್ಕೆ ಅವರು ಅತ್ಯಂತ ಶಾಂತವಾಗಿ ಪರಿಸ್ಥಿತಿಯನ್ನು ನಿಭಾಯಿಸಿದರು. ಘಟನೆಯ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಅವರು, "ನೀಲಿ ನನ್ನ ನೆಚ್ಚಿನ ಬಣ್ಣ... ಜೈ ಭೀಮ್!" ಎಂದು ಬರೆಯುವ ಮೂಲಕ ತಮಗೆ ಧೃತಿಗೆಡಿಸಲು ಪ್ರಯತ್ನಿಸಿದವರಿಗೆ ತಿರುಗೇಟು ನೀಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ