ತಿರುವನಂತಪುರಂ: ಇರುಮುಡಿ ಕಟ್ಟು ಹೊತ್ತು ಶಬರಿಮಲೆಯ 18 ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ 67 ವರ್ಷದ ರಾಷ್ಟ್ರಪತಿ ದ್ರೌಪದಿ ಮುರ್ಮು ಹೊಸ ದಾಖಲೆಯನ್ನೇ ಮಾಡಿದ್ದಾರೆ.
ಇಂದು ಕೇರಳಕ್ಕೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆ ದೇಗುಲ ದರ್ಶನ ಮಾಡಿದ್ದಾರೆ. ಇದಕ್ಕೆ ಸಾಂಪ್ರದಾಯಿಕವಾಗಿ ಎಲ್ಲಾ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿಕೊಂಡೇ ಅವರು ಬಂದಿದ್ದಾರೆ. ಅಯ್ಯಪ್ಪ ಮಾಲಧಾರಿಯಾಗಿ ಕಪ್ಪು ಸೀರೆ, ತಲೆಯಲ್ಲಿ ಇರುಮುಡಿ ಹೊತ್ತು ಅವರು ಸನ್ನಿಧಾನಕ್ಕೆ ಭಕ್ತಿಯಿಂದ ಬರಿಗಾಲಿನಲ್ಲಿ ಬಂದಿದ್ದಾರೆ.
ಈ ಮೂಲಕ ಅಯ್ಯಪ್ಪ ಮಾಲಧಾರಿಯಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಭೇಟಿ ನೀಡಿದ ಮೊದಲ ರಾಷ್ಟ್ರಪತಿ ಎಂಬ ದಾಖಲೆಯನ್ನು ಅವರು ಮಾಡಿದ್ದಾರೆ. ಅವರಿಗೆ ಭದ್ರತಾ ಸಿಬ್ಬಂದಿಗಳೂ ಸಾಥ್ ನೀಡಿದ್ದಾರೆ. ರಾಷ್ಟ್ರಪತಿಗಳಾಗಿದ್ದರೂ ಯಾವುದೇ ವಿಶೇಷ ಲಾಭ ಪಡೆಯದೇ ನಿಯಮದ ಪ್ರಕಾರವೇ ದೇವರ ದರ್ಶನ ಪಡೆದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇದಕ್ಕೆ ಮೊದಲು ರಾಷ್ಟ್ರಪತಿಗಳು ಬಂದಿಳಿದ ಹೆಲಿಕಾಪ್ಟರ್ ಚಕ್ರಗಳು ಹೂತು ಕೆಲವು ಕ್ಷಣ ಆತಂಕದ ಸನ್ನಿವೇಶ ಉಂಟಾಗಿತ್ತು. ಆದರೆ ತಕ್ಷಣವೇ ರಾಷ್ಟ್ರಪತಿಗಳನ್ನು ಸುರಕ್ಷಿತವಾಗಿ ಕರೆದೊಯ್ಯಲಾಗಿದೆ.