Publish Date: Sat, 08 Aug 2026 (08:55 IST)
Updated Date: Sat, 08 Aug 2026 (09:00 IST)
ಕೊಚ್ಚಿ: ಕೌಲಾಲಂಪುರದಿಂದ ಕೇರಳದ ಕೊಚ್ಚಿಗೆ ಹಾರಾಟ ನಡೆಸುತ್ತಿದ್ದ 'ಬಾಟಿಕ್ ಏರ್' ವಿಮಾನದ ನಡುಆಕಾಶದಲ್ಲಿದ್ದಾಗ, ಮಲಯಾಳಿ ಪ್ರಯಾಣಿಕನೊಬ್ಬ ತುರ್ತು ನಿರ್ಗಮನ ಬಾಗಿಲನ್ನು ಬಲವಂತವಾಗಿ ತೆರೆಯಲು ಯತ್ನಿಸಿದ ಅತ್ಯಂತ ಆತಂಕಕಾರಿ ಘಟನೆ ನಡೆದಿದೆ.
ವಿಮಾನದಲ್ಲಿದ್ದ ಸಹಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಆತನನ್ನು ಹತೋಟಿಗೆ ತಂದಿದ್ದರಿಂದ ಭಾರಿ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ಮಲೇಶಿಯಾದ ಕೌಲಾಲಂಪುರದಿಂದ ಕೊಚ್ಚಿಗೆ ಬಾಟಿಕ್ ಏರ್ ವಿಮಾನವು ಪ್ರಯಾಣಿಸುತ್ತಿದ್ದಾಗ, 34 ವರ್ಷದ ಜಮ್ಷೀರ್ ಅತನಿಕ್ಕಲ್ ಎಂಬ ಪ್ರಯಾಣಿಕ ಏಕಾಏಕಿ ಎದ್ದು ಎಮರ್ಜೆನ್ಸಿ ಡೋರ್ ಬಳಿ ತೆರಳಿ ಬಾಗಿಲು ತೆರೆಯಲು ಕಸರತ್ತು ನಡೆಸಿದ್ದಾನೆ.
ಯುವಕನ ಅಪಾಯಕಾರಿ ನಡವಳಿಕೆಯನ್ನು ಕಂಡ ತಕ್ಷಣ ಜಾಗೃತರಾದ ವಿಮಾನ ಸಿಬ್ಬಂದಿ ಮತ್ತು ಜೊತೆಯಲ್ಲಿದ್ದ ಸಹಪ್ರಯಾಣಿಕರು ಆತನನ್ನು ಹಿಡಿದು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ವಿಮಾನ ಸುರಕ್ಷಿತವಾಗಿ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
ವಿಮಾನ ಸುರಕ್ಷಿತವಾಗಿ ಇಳಿಯುತ್ತಿದ್ದಂತೆ ಕೊಚ್ಚಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಆರೋಪಿ ಜಮ್ಷೀರ್ ಅತನಿಕ್ಕಲ್‌ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ ಈ ರೀತಿ ವರ್ತಿಸಲು ಮಾನಸಿಕ ಅಸ್ವಸ್ಥತೆ ಕಾರಣವೇ ಅಥವಾ ಬೇರೆ ಏನಾದರೂ ಉದ್ದೇಶವಿತ್ತೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ನಡುಆಕಾಶದಲ್ಲಿ ಅತಿ ಹೆಚ್ಚಿನ ಗಾಳಿಯ ಒತ್ತಡವಿರುವುದರಿಂದ ಸಾಮಾನ್ಯ ಸಂದರ್ಭಗಳಲ್ಲಿ ಎಮರ್ಜೆನ್ಸಿ ಡೋರ್ ತೆರೆಯುವುದು ಸುಲಭವಲ್ಲವಾದರೂ, ಆತನ ಈ ದುಷ್ಟ ಯತ್ನ ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸಿತ್ತು. ವಿಮಾನಯಾನ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಆತನಿಗೆ 'ನೋ ಫ್ಲೈ ಲಿಸ್ಟ್' ಸೇರ್ಪಡೆ ಸೇರಿದಂತೆ ಕಠಿಣ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ