Publish Date: Mon, 07 Sep 2026 (09:02 IST)
Updated Date: Mon, 07 Sep 2026 (09:09 IST)
ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಡೋಡಾ ಜಿಲ್ಲೆಯ ಶೀವಾ ದಲ್ (ಪ್ರೇಮ್ ನಗರ) ಸೇತುವೆಯ ಬಳಿ 21 ವರ್ಷದ ಯುವತಿ ಪಾಯಲ್ ದೇವಿ, ಭೋರ್ಗರೆಯುವ ಚಿನಾಬ್ ನದಿಗೆ ಧುಮುಕಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ವರದಿಯಾಗಿದೆ. ತಂದೆಗೆ ಫೋನ್‌ನಲ್ಲಿ "ಬೈ-ಬೈ ಅಪ್ಪ, ಇದು ನನ್ನ ಜೀವನ" ಎಂದು ಹೇಳುತ್ತಲೇ ಕ್ಷಣಾರ್ಧದಲ್ಲಿ ನದಿಯ ರಭಸದ ಅಲೆಗಳಿಗೆ ಹಾರಿದ ಈ ಯುವತಿಯ ಕೃತ್ಯ ಇಡೀ ಪ್ರದೇಶವನ್ನೇ ತೀವ್ರ ಆಘಾತಕ್ಕೆ ತಳ್ಳಿದೆ.
ಘಟನೆಯ ಹಿನ್ನೆಲೆ
ಮೊಹಾಲ್ಲಾ ತಹಸೀಲ್‌ನ ಕೊರಾರಾ ನಿವಾಸಿಯಾದ ಪಾಯಲ್ ದೇವಿ ಅವರು ಸ್ಥಳೀಯ ಮೇಳವೊಂದಕ್ಕೆ ತೆರಳಿದ್ದರು. ಮೇಳ ಮುಗಿಸಿ ತಮ್ಮ ಗ್ರಾಮದ ಪರಿಚಿತ ವ್ಯಕ್ತಿಯೊಬ್ಬರ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ ಬರುವಾಗ, ಶೀವಾ ಸೇತುವೆಯ ಬಳಿ ಆಕೆಯ ದುಪಟ್ಟಾ ಬೈಕ್‌ನ ಚಕ್ರಕ್ಕೆ ಸಿಲುಕಿಕೊಂಡಿದೆ. ಬೈಕ್ ನಿಲ್ಲಿಸಿ ಅದನ್ನು ತೆಗೆಯುತ್ತಿದ್ದಾಗ, ಪಾಯಲ್ ದಿಢೀರನೆ ಓಡಿಹೋಗಿ ಸೇತುವೆಯ ತುದಿಯಲ್ಲಿ ನಿಂತಿದ್ದಾಳೆ.
ಆಕೆಯ ಜೊತೆಗಿದ್ದ ವ್ಯಕ್ತಿ ತಕ್ಷಣವೇ ಪಾಯಲ್ ಅವರ ತಂದೆ ಕೃಷನ್ ಲಾಲ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಂದೆ ಫೋನ್‌ನಲ್ಲಿ ಆಕೆಯೊಂದಿಗೆ ಮಾತನಾಡಿ, "ಏನಾಯಿತು ಮಗಳೇ, ಯಾರಾದರೂ ನಿನಗೆ ತೊಂದರೆ ಕೊಟ್ಟಿದ್ದಾರೆಯೇ?" ಎಂದು ಎಷ್ಟೇ ಸಮಾಧಾನಪಡಿಸಲು ಯತ್ನಿಸಿದರೂ ಆಕೆ ಕೇಳಲಿಲ್ಲ. "ಯಾರೂ ನನ್ನ ಹತ್ತಿರ ಬರಬೇಡಿ. ಇದು ನನ್ನ ಜೀವನ, ನನ್ನ ಮನಸ್ಸು ಹೇಳಿದಂತೆ ನಾನು ನಿರ್ಧಾರ ತೆಗೆದುಕೊಂಡಿದ್ದೇನೆ. ಬೈ-ಬೈ ಅಪ್ಪ" ಎಂದು ಹೇಳಿ ಫೋನ್ ಇಟ್ಟ ಆಕೆ, ತಡೆಯಲು ಬಂದ ಪ್ರತ್ಯಕ್ಷದರ್ಶಿಗಳ ಮಾತಿಗೂ ಕಿವಿಗೊಡದೆ ಚಿನಾಬ್ ನದಿಯ ಉಗ್ರ ಅಲೆಗಳಿಗೆ ಧುಮುಕಿದ್ದಾಳೆ.
ಅಹೋರಾತ್ರಿ ಶೋಧ ಕಾರ್ಯಾಚರಣೆ:
ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜಮ್ಮು-ಕಾಶ್ಮೀರ ಪೋಲೀಸರು, ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ಮತ್ತು ಸ್ಥಳೀಯ ಈಜುಗಾರರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಚಿನಾಬ್ ನದಿಯ ಅತ್ಯಂತ ವೇಗದ ಹರಿವು ಮತ್ತು ಆಳದ ಕಾರಣದಿಂದಾಗಿ ಹುಡುಕಾಟಕ್ಕೆ ತೀವ್ರ ಅಡೆತಡೆ ಉಂಟಾಗಿದ್ದು, ಯುವತಿಯ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ನಗುನಗುತ್ತಿರಬೇಕಾಗಿದ್ದ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಯುವತಿಯ ಈ ಹಠಾತ್ ನಿರ್ಧಾರಕ್ಕೆ ಅಸಲಿ ಕಾರಣವೇನು ಎಂಬುದರ ಕುರಿತು ಪೊಲೀಸರು ಸುದೀರ್ಘ ತನಿಖೆ ಕೈಗೊಂಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ