Publish Date: Sat, 05 Sep 2026 (10:32 IST)
Updated Date: Sat, 05 Sep 2026 (10:41 IST)
ಬುಲಂದ್‌ಶಹರ್: ಸಮಾಜವಾದಿ ಪಕ್ಷದ ಮಾಜಿ ಶಾಸಕ ಹಾಗೂ 'ಬಾಹುಬಲಿ' ನಾಯಕ ಎಂದೇ ಗುರುತಿಸಿಕೊಂಡಿರುವ ಶ್ರೀಭಗವಾನ್ ಶರ್ಮಾ ಅಲಿಯಾಸ್ ಗುಡ್ಡು ಪಂಡಿತ್, ತಮ್ಮ ಮೂರನೇ ಪತ್ನಿ ಹಾಗೂ ಕಾಂಗ್ರೇಸ್ ನಾಯಕಿ ಅರ್ಚನಾ ಪಾಂಡಾ ಅವರ ಮೇಲೆ ದೌರ್ಜನ್ಯ ಎಸಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ.
ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿರುವ ಅರ್ಚನಾ ಪಾಂಡಾ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಗುಡ್ಡು ಪಂಡಿತ್ ಅವರು ಅರ್ಚನಾ ಅವರ ಕೂದಲು ಹಿಡಿದು ನೆಲದ ಮೇಲೆ ಎಳೆದೊಯ್ಯುತ್ತಿರುವುದು ಕಂಡುಬಂದಿದೆ. ಈ ವೇಳೆ ತಮ್ಮನ್ನು ರಕ್ಷಿಸಿಕೊಳ್ಳಲು ಯತ್ನಿಸಿದ ಅರ್ಚನಾ, ಕೈಯಲ್ಲಿದ್ದ ಪೊರಕೆಯಿಂದ ತಿರುಗೇಟು ನೀಡಲು ಯತ್ನಿಸಿದ್ದಾರೆ.
ಘಟನೆಯ ವಿವರ:
ಅರ್ಚನಾ ಪಾಂಡಾ ಅವರು ನೀಡಿದ ದೂರಿನ ಪ್ರಕಾರ, ಅವರು ತಮ್ಮ ಮಗನೊಂದಿಗೆ ಮನೆಯಲ್ಲಿದ್ದಾಗ ಗುಡ್ಡು ಪಂಡಿತ್ ಬಲವಂತವಾಗಿ ಮನೆಗೆ ನುಗ್ಗಿ ಗಲಾಟೆ ಆರಂಭಿಸಿದ್ದಾರೆ. ಬಾಗಿಲು ತೆಗೆಯುತ್ತಿದ್ದಂತೆ ಅರ್ಚನಾ ಅವರನ್ನು ತಳ್ಳಿ ನೆಲಕ್ಕೆ ಬೀಳಿಸಿ, ಕೂದಲು ಹಿಡಿದು ಹಿಂಸಿಸಿದ್ದಾರೆ. ಮನೆಯ ಕೆಲಸದಾಳು ಈ ಘಟನೆಯನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಪ್ರಾರಂಭಿಸಿದಾಗ ಗುಡ್ಡು ಪಂಡಿತ್ ಹಿಂದೆಗೆದು ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ.
ಪೊಲೀಸ್ ದೂರು ಹಾಗೂ ರಕ್ಷಣೆಗಾಗಿ ಮನವಿ:
ಎರಡು ಬಾರಿ ಶಾಸಕರಾಗಿದ್ದ ಗುಡ್ಡು ಪಂಡಿತ್ ವಿರುದ್ಧ ಅರ್ಚನಾ ಪಾಂಡಾ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಸ್ತುತ ನ್ಯಾಯಾಲಯದಲ್ಲಿ ಇಬ್ಬರ ನಡುವೆ ವಿಚ್ಛೇದನದ ಪ್ರಕರಣ ನಡಿಯುತ್ತಿದ್ದು, ಪ್ರಕರಣವನ್ನು ಹಿಂಪಡೆಯುವಂತೆ ತಮ್ಮ ಮೇಲೆಯೂ ಹಾಗೂ ತಮ್ಮ ಮಗನ ಮೇಲೆಯೂ ನಿರಂತರವಾಗಿ ಬೆದರಿಕೆ ಹಾಕಲಾಗುತ್ತಿದೆ ಎಂದು ಅರ್ಚನಾ ಆರೋಪಿಸಿದ್ದಾರೆ. ಹೀಗಾಗಿ ತಮಗೂ ಹಾಗೂ ಮಗನಿಗೂ ಜೀವಭಯವಿದ್ದು, 24 ಗಂಟೆಗಳ ಕಾಲ ಮಹಿಳಾ ಪೊಲೀಸ್ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದ್ದು, ವೈರಲ್ ವಿಡಿಯೋ ಹಾಗೂ ದೂರಿನ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬುಲಂದ್‌ಶಹರ್ ಪೊಲೀಸರು ತಿಳಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ