Publish Date: Fri, 24 Jul 2026 (10:02 IST)
Updated Date: Fri, 24 Jul 2026 (10:12 IST)
ನಿಜವಾದ ಹೀರೋಗಳೂ ಯಾವಾಗಲೂ ಸೂಪರ್ ಹೀರೋಗಳಂತೆ ಕ್ಯಾಪ್ ಧರಿಸಿ ಬರುವುದಿಲ್ಲ. ಅವರ ಹತ್ತಿರ ಇರುವುದು ಕೇವಲ ಧೈರ್ಯ, ಕರುಣೆ ಮತ್ತು ತಮ್ಮ ಕರ್ತವ್ಯದ ಮೇಲಿರುವ ಅಪಾರ ನಿಷ್ಠೆ! ಇದಕ್ಕೆ ಜೀವಂತ ಸಾಕ್ಷಿಯಂತೆ ನಿಲ್ಲುತ್ತದೆ ಹಿಮಾಚಲ ಪ್ರದೇಶದಲ್ಲಿ ನಡೆದ ಈ ರೋಮಾಂಚಕಾರಿ ಹಾಗೂ ಕಣ್ಣೀರು ತರಿಸುವ ಘಟನೆ.
ತಮ್ಮ ಜೀವವನ್ನೇ ಪಣಕ್ಕಿಟ್ಟು, ಬೃಹತ್ ಬೆಟ್ಟ ಕುಸಿದು ಕಲ್ಲುಗಳು ಬೀಳುತ್ತಿದ್ದ ಅಪಾಯಕಾರಿ ಹಾದಿಯಲ್ಲಿ 7 ತಿಂಗಳ ಕಂದಮ್ಮನನ್ನು ಎದೆಗೆ ಅಪ್ಪಿಕೊಂಡು ಸುರಕ್ಷಿತವಾಗಿ ದಡ ತಲುಪಿಸಿದ ಆಂಬ್ಯುಲೆನ್ಸ್ ಸಿಬ್ಬಂದಿಯ ಸಾಹಸಕ್ಕೆ ಇಡೀ ದೇಶವೇ ಸಾಷ್ಟಾಂಗ ನಮಸ್ಕಾರ ಹೇಳುತ್ತಿದೆ.
ಅಪಾಯದ ಹಾದಿ, ಕ್ಷಣ ಕ್ಷಣಕ್ಕೂ ಕಲ್ಲುಮಳೆ
:ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭೀಕರ ಭೂಕುಸಿತ ಸಂಭವಿಸಿ ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಬೆಟ್ಟದ ಮೇಲಿಂದ ದೊಡ್ಡ ದೊಡ್ಡ ಬಂಡೆಗಳು ಮತ್ತು ಮಣ್ಣಿನ ತುಣುಕುಗಳು ರಸ್ತೆಯ ಮೇಲೆ ನಿರಂತರವಾಗಿ ಬೀಳುತ್ತಿದ್ದವು. ಅದೇ ಸಮಯದಲ್ಲಿ 7 ತಿಂಗಳ ಮಗುವಿಗೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿತ್ತು. ಆಂಬ್ಯುಲೆನ್ಸ್ ಮುಂದೆ ಸಾಗಲು ರಸ್ತೆಯೇ ಇರಲಿಲ್ಲ. ರಸ್ತೆ ಸರಿ ಹೊಂದುವವರೆಗೆ ಕಾಯುತ್ತಾ ಕುಳಿತಿದ್ದರೆ ಮಗುವಿನ ಪ್ರಾಣಕ್ಕೇ ಕಂಟಕವಾಗುತ್ತಿತ್ತು. ಇದನ್ನು ಅರಿತ ಆಂಬ್ಯುಲೆನ್ಸ್ ಸಿಬ್ಬಂದಿ, ಮಗುವನ್ನು ಜಾಗರೂಕತೆಯಿಂದ ಬಟ್ಟೆಯಲ್ಲಿ ಸುತ್ತಿ ತಮ್ಮ ಎದೆಗೆ ಅಪ್ಪಿಕೊಂಡರು.
ತಮ್ಮ ತಲೆಯ ಮೇಲೆಯೇ ಕಲ್ಲುಗಳು ಉರುಳಿ ಬೀಳುವ ಭೀತಿಯಿದ್ದರೂ, ಆ ರಕ್ಷಕ ಮಣ್ಣು-ಕಲ್ಲುಗಳ ನಡುವೆ ಹೆಜ್ಜೆ ಹೆಜ್ಜೆಯನ್ನೂ ಜಾಗರೂಕತೆಯಿಂದ ಇಡುತ್ತಾ ಮುಂದೆ ಸಾಗಿದರು. ಸ್ವಲ್ಪ ಕಾಲು ಜಾರಿದರೂ ಆಳವಾದ ಪ್ರಪಾತ ಅಥವಾ ಬೀಳುವ ಬಂಡೆಗೆ ಬಲಿಯಾಗುವ ಅಪಾಯವಿತ್ತು. ಆದರೆ, ತಮ್ಮ ಸ್ವಂತ ಜೀವಕ್ಕಿಂತಲೂ ಆ ಅಪರಿಚಿತ ಮಗುವಿನ ಪ್ರಾಣವೇ ಮುಖ್ಯವೆಂದು ಭಾವಿಸಿದ ಆ ಧೀರ ಸಿಬ್ಬಂದಿ, ಯಶಸ್ವಿಯಾಗಿ ಆ ಅಪಾಯಕಾರಿ ಹಾದಿಯನ್ನು ದಾಟಿ ಮಗುವನ್ನು ಆಂಬ್ಯುಲೆನ್ಸ್‌ಗೆ ತಲುಪಿಸಿ ಆಸ್ಪತ್ರೆಗೆ ಸೇರಿಸಿದರು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಲಕ್ಷಾಂತರ ಜನರು ಕಣ್ಣೀರು ಹಾಕಿದ್ದಾರೆ. "ದೇವರೆಂದರೆ ದೇವಸ್ಥಾನದಲ್ಲಿರುವ ವಿಗ್ರಹವಲ್ಲ, ಕಷ್ಟದ ಸಮಯದಲ್ಲಿ ಜೀವ ಉಳಿಸಲು ಬರುವ ಇಂತಹ ಸಿಬ್ಬಂದಿಯೇ ನಿಜವಾದ ದೇವರು" ಎಂದು ನೆಟ್ಟಿಗರು ಕೊಂಡಾಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ