Publish Date: Thu, 15 May 2014 (16:33 IST)
Updated Date: Thu, 15 May 2014 (16:38 IST)
ಮೇ 17 ರಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿಯನ್ನು ಸ್ವಾಗತಿಸಲು ವಾರಣಾಸಿಯ ಬಿಜೆಪಿ ಘಟಕ ಸಜ್ಜಾಗುತ್ತಿದೆ.
ಬಿಜೆಪಿಯ ಕೇಂದ್ರ ಕಚೇರಿ ಮೋದಿ ಮೇ 17 ರಂದು ವಾರಣಾಸಿಗೆ ಭೇಟಿ ನೀಡಲಿದ್ದಾರೆ ಎಂದು ಖಚಿತ ಪಡಿಸಿಲ್ಲವಾದರೂ, ಫಲಿತಾಂಶ ಘೋಷಣೆಯ ಮರುದಿನ ಮೋದಿ ಕಾಶಿ ವಿಶ್ವನಾಥನ ದರ್ಶನಕ್ಕೆ ಬರುವ ಸಂಭವವಿರುವುದರಿಂದ ಪೂರ್ವ ಸಿದ್ಧತೆ ನಡೆಸಲು ಸೂಚಿಸಲಾಗಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ವಾರಣಾಸಿಯ ಸಂಸದತ್ವದ ಪ್ರಮಾಣಪತ್ರ ಪಡೆಯಲು ಮೇ 16 ರಂದು ಮೋದಿ ಬರುವುದಿಲ್ಲ. ಅವರ ಪ್ರತಿನಿಧಿ ಅದನ್ನು ಸ್ವೀಕರಿಸುತ್ತಾರೆ. ಆದ್ದರಿಂದ ತಮ್ಮ ಕೃತಜ್ಞತೆ ವ್ಯಕ್ತಪಡಿಸಲು ಮತ್ತು ಕಾಶಿ ವಿಶ್ವನಾಥನಲ್ಲಿ ಪ್ರಾರ್ಥನೆ ಸಲ್ಲಿಸಲು ವಾರಣಾಸಿಗೆ ಆಗಮಿಸಲಿದ್ದಾರೆ ಎಂದು ಉತ್ತರಪ್ರದೇಶದ ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಒಟ್ಟಿನಲ್ಲಿ ಅತಿಯಾದ ಆತ್ಮವಿಶ್ವಾಸದಲೆಯಲ್ಲಿ ತೇಲುತ್ತಿರುವ ಬಿಜೆಪಿ ಕೂಸು ಹುಟ್ಟುವ ಮೊದಲು ಕುಲಾವಿ ಹೊಲಿಯುತ್ತಿದೆ.