ತಿರುಪತಿ: ವೈಕುಂಠ ದ್ವಾರ ದರ್ಶನಕ್ಕೆ ಟಿಕೆಟ್ ಖರೀದಿ ಮಾಡುವಾಗ ನೂಕುನುಗ್ಗಲು ಉಂಟಾಗಿ ಗಾಯಗೊಂಡಿದ್ದ 35 ಭಕ್ತರಿಗೆ ಟಿಟಿಡಿ ಸ್ಪೆಷಲ್ ಆಫರ್ ನೀಡಿದೆ.
ಮೊನ್ನೆ ರಾತ್ರಿ ತಿರುಪತಿಯಲ್ಲಿ ನಡೆದ ಕಾಲ್ತುಳಿತದಲ್ಲಿ ಆರು ಮಂದಿ ಸಾವನ್ನಪ್ಪಿದರೆ 35 ಮಂದಿ ಗಾಯಗೊಂಡಿದ್ದರು. ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇವರನ್ನು ಸ್ವತಃ ಸಿಎಂ ಚಂದ್ರಬಾಬು ನಾಯ್ಡು ನಿನ್ನೆ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಈ ನಡುವೆ ದುರಂತದಿಂದಾಗಿ ವೈಕುಂಠ ದ್ವಾರ ದರ್ಶನ ಪಡೆಯಲು ಸಾಧ್ಯವಾಗದೇ ಹೋಯಿತಲ್ಲ ಎಂದು ಕೊರಗಿದ ಗಾಯಾಳು ಭಕ್ತರಿಗೆ ಟಿಟಿಡಿಯೇ ಸ್ಪೆಷಲ್ ದರ್ಶನ ವ್ಯವಸ್ಥೆ ಮಾಡಿದೆ. ಆ ಮೂಲಕ ಗಾಯಾಳುಗಳ ಕನಸು ನನಸು ಮಾಡಿದೆ.
ವೈಕುಂಠ ಏಕಾದಶಿ ದಿನ ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನ ಮಾಡಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ. ಇಂದು ವೈಕುಂಠ ಏಕಾದಶಿಯಾಗಿದ್ದು ಎಲ್ಲಾ ಗಾಯಾಳುಗಳಿಗೆ ಟಿಟಿಡಿಯೇ ಯಾವುದೇ ಸರತಿಯಿಲ್ಲದೇ ತಿಮ್ಮಪ್ಪನ ನೇರ ದರ್ಶನ ಮಾಡಿಸಿ ಆಸೆ ಪೂರೈಸಿದೆ.