ಪ್ರಯಾಗ್‌ರಾಜ್: ಇನ್ಫೋಸಿಸ್ ಫೌಂಡೇಷನ್‌ನ ಮಾಜಿ ಮುಖ್ಯಸ್ಥೆ, ರಾಜ್ಯಸಭೆ ಸದಸ್ಯೆ ಸುಧಾ ಮೂರ್ತಿ ಅವರು ಮಹಾ ಕುಂಭಮೇಳಕ್ಕೆ ತೆರಳಿದ್ದು, ಇಸ್ಕಾನ್ ಶಿಬಿರದಲ್ಲಿ ಭಕ್ತರಿಗೆ ಮಹಾಪ್ರಸಾದ ಬಡಿಸುವ ಸೇವೆ ಮಾಡುತ್ತಿದ್ದಾರೆ.
ಮಹಾಪ್ರಸಾದ ತಯಾರಿಕೆಗೆ ಅದಾನಿ ಗ್ರೂಪ್ ಹಾಗೂ ಇಸ್ಕಾನ್ ಸಹಯೋಗದೊಂದಿಗೆ ನಿರ್ಮಿಸಲಾದ ಅಡುಗೆ ಮನೆಯಲ್ಲಿರುವ ಯಂತ್ರಗಳನ್ನು ಇದೇ ವೇಳೆ ಸುಧಾ ಮೂರ್ತಿಯವರು ವೀಕ್ಷಿಸಿದ್ದಾರೆ. ಮಹಾ ಕುಂಭಮೇಳ ಪ್ರದೇಶದಲ್ಲಿ ಪ್ರತಿದಿನ 40 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಮಹಾಪ್ರಸಾದವನ್ನು ವಿತರಿಸಲಾಗುತ್ತಿದೆ.
ಮಹಾಪ್ರಸಾದವನ್ನು ತಯಾರಿಸಲು ಬಳಸುವ ಅಡುಗೆಮನೆ ನೀರನ್ನು ಬಿಸಿಮಾಡಲು ಮತ್ತು ತರಕಾರಿಗಳು ಮತ್ತು ಅಕ್ಕಿಯನ್ನು ಬೇಯಿಸಲು ಬಾಯ್ಲರ್‌ಗಳಂತಹ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಭಾರವಾದ ಆಹಾರ ಪಾತ್ರೆಗಳನ್ನು ಸಾಗಿಸಲು ಟ್ರ್ಯಾಕ್‌ಗಳನ್ನು ಹಾಕಲಾಗಿದೆ. ರೊಟ್ಟಿ ತಯಾರಿಸಲು ಮೂರು ದೊಡ್ಡ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಈ ಯಂತ್ರಗಳು ಒಟ್ಟಾಗಿ ಒಂದು ಗಂಟೆಯಲ್ಲಿ 10,000 ರೊಟ್ಟಿಗಳನ್ನು ತಯಾರಿಸುತ್ತವೆ.
ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರ ಪತ್ನಿಯಾಗಿರುವ ಸುಧಾಮೂರ್ತಿ ಅವರು ಮಾಧ್ಯಮಗಳೊಂದಿಗೆ ಮಾತನಾಡುವಾಗ, ಮಹಾ ಕುಂಭವನ್ನು ʻತೀರ್ಥರಾಜʼ ಎಂದರು. ಬಳಿಕ, ನನ್ನ ಮುತ್ತಜ್ಜ, ಅಜ್ಜಿ, ಅವರಲ್ಲಿ ಯಾರೂ ಇಲ್ಲಿಗೆ ಬರಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ನಾನು ಅವರ ಹೆಸರಿನಲ್ಲಿ ತರ್ಪಣವನ್ನು ಅರ್ಪಿಸಬೇಕಾಗಿದೆ. ನಾನು ತುಂಬಾ ಸಂತೋಷವಾಗಿದ್ದೇನೆ ಎಂದಿದ್ದಾರೆ.