ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಮಹಿಳೆಯೊಬ್ಬಳು ತನ್ನ ನವ ಜಾತ ಗಂಡು ಮಗುವನ್ನು ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದ ಅಹಮದ್ನಗರದ ಶಿರಡಿ ನಗರದಲ್ಲಿ ನಡೆದಿದೆ.ಬಡತನದ ಕಾರಣದಿಂದ ಮೂರುದಿನದ ಗಂಡು ಮಗುವನ್ನು ಮುಂಬೈ ಮೂಲದ ವ್ಯಕ್ತಿಗೆ 1 ಲಕ್ಷದ 78 ಸಾವಿರ ರೂಪಾಯಿಗೆ ಮಾರಿದ್ದಾಳೆ. ಸದ್ಯ ಥಾಣೆಯ ಡೊಂಬಿವಿಲಿ ಪಟ್ಟಣದ ಮಾನ್ಪಾಡಾ ಪೊಲೀಸರು ಮಗುವನ್ನು ಮಾರಿದ್ದ ತಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಮಗುವನ್ನು ಮಾರಲು ಸಹಾಯ ಮಾಡಿದ್ದ ನಾಲ್ವರ ಮೇಲೆ ಎಫ್ಐಆರ್ ಕೂಡ ದಾಖಲು ಮಾಡಲಾಗಿದೆ.