ಫರಿದಾಬಾದ್: ತಾನೇ ಸೊಸೆಯನ್ನು ಕೊಂದು, ಠಾಣೆಯಲ್ಲಿ ನಾಪತ್ತೆ ದೂರನ್ನು ನೀಡಿ, ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್ ಆಗಿದ್ದಾನೆ.
24 ವರ್ಷದ ತನು ಸಿಂಗ್ ಅವರ ದೇಹವನ್ನು ಹರಿಯಾಣದ ಫರಿದಾಬಾದ್‌ನಲ್ಲಿರುವ ಆಕೆಯ ಮನೆಯ ಮುಂಭಾಗದಲ್ಲಿದ್ದ ಗುಂಡಿಯಿಂದ ಹೊರತೆಗೆಯಲಾಯಿತು. ಎರಡು ತಿಂಗಳ ಹಿಂದೆ ಆಕೆಯನ್ನು ಕೊಲೆ ಮಾಡಿ, ಗುಂಡಿಯಲ್ಲಿ ಹೂತುಹಾಕಿದ್ದಾರೆ.
ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಶಿಕೋಹಾಬಾದ್ ಮೂಲದ ತನು, ಫರಿದಾಬಾದ್‌ನ ರೋಷನ್ ನಗರದ ಅರುಣ್ ಸಿಂಗ್ ಎಂಬಾತನನ್ನು ಮದುವೆಯಾಗಿದ್ದರು.
ಶುಕ್ರವಾರ ಮುಂಜಾನೆ ಆಕೆಯ ಕೊಳೆತ ದೇಹವನ್ನು ಸಿಂಗ್ ಕುಟುಂಬದ ಮನೆಯ ಹೊರಗೆ ನೇರವಾಗಿ ಸಾರ್ವಜನಿಕ ಲೇನ್‌ನಲ್ಲಿರುವ 10 ಅಡಿ ಆಳದ ಹೊಂಡದಿಂದ ಹೊರತೆಗೆಯಲಾಯಿತು.
ಆಕೆಯ ನಾಪತ್ತೆಯಾಗಿದ್ದಾಳೆ ಎಂಬ ದೂರು ನೀಡಿದ 2ತಿಂಗಳ ಬಳಿಕ ಶವ ಪತ್ತೆಯಾಗಿದೆ.
ಮಾವ ಭೂಪ್ ಸಿಂಗ್ ವಿಚಾರಣೆ ವೇಳೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರ ಪ್ರಕಾರ, ಏಪ್ರಿಲ್ 21-22 ರ ರಾತ್ರಿ ಭೂಪ್ ಸಿಂಗ್ ತನ್ನ ಪತ್ನಿ ಸೋನಿಯಾ ಮತ್ತು ಮಗ ಅರುಣ್ ಇಲ್ಲದಿದ್ದಾಗ ಮನೆಯ ಮೊದಲ ಮಹಡಿಯಲ್ಲಿ ತನುವನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಅವರು ದೇಹವನ್ನು ಅಗೆದಿದ್ದ ಗುಂಡಿಯಲ್ಲಿ ಹೂತು ಹಾಕಿದ್ದಾನೆ.
ಇದೀಗ ಈ ಕೊಲೆ ಪ್ರಕರಣದಲ್ಲಿ ಇತರರ ಕೈವಾಡವಿರುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ವರದಕ್ಷಿಣೆ ಸಲುವಾಗಿ ಕೊಲೆ ನಡೆದಿದೆ ಎನ್ನಲಾಗಿದೆ.
ಕೊಲೆ ಮಾಡಿದ ಬಳಿಕ ಮಾವ ಭೂಪ್ ಸಿಂಗ್ ಏಪ್ರಿಲ್ 25 ರಂದು ಸೊಸೆ ತನು ಕಾಣೆಯಾಗಿರುವ ಬಗ್ಗೆ ದೂರನ್ನು ನೀಡಿದ್ದಾನೆ.