Publish Date: Fri, 11 Mar 2022 (12:22 IST)
Updated Date: Fri, 11 Mar 2022 (12:24 IST)
ಲಕ್ನೋ : ಉತ್ತರ ಪ್ರದೇಶದ ಚುನಾವಣೆಯ ಫಲಿತಾಂಶ ನಮಗೊಂದು ಪಾಠವಾಗಿದ್ದು, ಭವಿಷ್ಯದಲ್ಲಿ ಮತ್ತೆ ಗೆಲ್ಲುತ್ತೇವೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳಲ್ಲಿ ಬಹುಜನ ಸಮಾಜ ಪಕ್ಷವು ಕೇವಲ ಒಂದು ಸ್ಥಾನವನ್ನು ಮಾತ್ರ ಗೆದ್ದಿದ್ದು, ಹೀನಾಯ ಸೋಲನ್ನು ಅನುಭವಿಸಿದೆ. ಇದೀಗ ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಯಾವತಿ ಅವರು,
ಉತ್ತರ ಪ್ರದೇಶದ ಚುನಾವಣಾ ಫಲಿತಾಂಶಗಳು ಬಿಎಸ್ಪಿಯ ನಿರೀಕ್ಷೆಗಳಿಗೆ ವಿರುದ್ಧವಾಗಿವೆ. ಅದಕ್ಕೆ ನಾವು ಎದೆಗುಂದಬಾರದು. ಬದಲಾಗಿ ನಾವು ಅದರಿಂದ ಪಾಠ ಕಲಿಯಬೇಕು, ಆತ್ಮಾವಲೋಕನ ಮಾಡಿಕೊಳ್ಳಬೇಕು, ನಮ್ಮ ಪಕ್ಷದ ಚಳವಳಿಯನ್ನು ಮುಂದುವರಿಸಬೇಕು ಮತ್ತು ಮತ್ತೆ ಅಧಿಕಾರಕ್ಕೆ ಬರಬೇಕು. ಈ ಚುನಾವಣಾ ಫಲಿತಾಂಶಗಳು ಬಿಎಸ್ಪಿಗೆ ಭವಿಷ್ಯದ ಪಾಠವಾಗಿದೆ ಎಂದು ಹೇಳಿದ್ದಾರೆ.
2017ಕ್ಕೂ ಮುನ್ನ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶಗಳು ಸಿಕ್ಕಿರಲಿಲ್ಲ. ಇಂದು ಕಾಂಗ್ರೆಸ್ ಕೂಡ ಬಿಜೆಪಿಯಂತೆಯೇ ಅದೇ ಹಂತಕ್ಕೆ ಹೋಗುತ್ತಿದೆ. ಉತ್ತರಪ್ರದೇಶದ ಚುನಾವಣಾ ಫಲಿತಾಂಶವು ನಮ್ಮ ಪ್ರಯತ್ನಗಳನ್ನು ಮುಂದುವರಿಸಲು ಪಾಠವಾಗಿದೆ ಎಂದಿದ್ದಾರೆ.