ಜೈಲುಪಾಲಾಗಿ ಮುಖ್ಯಮಂತ್ರಿ ಗಾದಿಯನ್ನೇರುವ ಕನಸನ್ನು ಕಳೆದುಕೊಂಡಿರುವ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ನಿನ್ನೆ ಜೈಲಿನಿಂದಲೇ ತಮ್ಮ ಬೆಂಬಲಿಗ ಪಳನಿಸ್ವಾಮಿ ಪ್ರಮಾಣವಚನ ಸ್ವೀಕರಿಸುವುದನ್ನು ನೋಡಿದರು. ದೂರದರ್ಶನದಲ್ಲಿ ಪ್ರಮಾಣವಚನ ಸಮಾರಂಭವನ್ನು ವೀಕ್ಷಿಸುತ್ತಿದ್ದ ಅವರ ಕಣ್ಣಿಂದ ನೀರು ಹನಿಹನಿಯಾಗಿ ಇಳಿಯುತ್ತಿತ್ತು. ತಮ್ಮ ಬೆಂಬಲಿಗ ಸಿಎಂ ಗಾದಿಯನ್ನೇರುತ್ತಿರುವ ಬಗ್ಗೆ ಸಮಾಧಾನವಿದ್ದರೂ, ಇದು ತಮ್ಮ ಕನಸು ಇತರರ ಪಾಲಾಗುತ್ತಿರುವುದರ ದುಃಖದ ಪ್ರತೀಕದಂತಿದ್ದು ಅವರ ಮೌನಶೋಕ.
ತಮ್ಮ ಅತ್ತಿಗೆ ಇಳವರಸಿ ಮತ್ತು ಇತರ ಸಹಕೈದಿಗಳ ಜತೆಯಲ್ಲಿ ಪಳನಿಸ್ವಾಮಿ ಮತ್ತು ಇತರ 30 ಬೆಂಬಲಿಗರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದನ್ನು ಶಶಿಕಲಾ ಕಣ್ಣೀರುತ್ತಾ ನೋಡಿದರು ಎಂದು ಹೆಸರು ಹೇಳಲು ಬಯಸದ ಜೈಲು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಅಕ್ರಮ ಆಸ್ತಿ ಪ್ರಕರಣದಡಿಯಲ್ಲಿ ಜೈಲು ಸೇರಿರುವ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಮೇಲೆ ಜೈಲಿನಲ್ಲಿ ಹಲ್ಲೆಯಾಗುವ ಭೀತಿ ಇರುವುದರಿಂದ ಅವರಿರುವ ಸೆಲ್‌ಗೆ ಬಿಗಿ ಭದ್ರತೆ ನೀಡಲಾಗಿದೆ.ಜೈಲಿನಲ್ಲಿರುವ ತಮಿಳು ಖೈದಿಗಳಿಂದ ಶಶಿಕಲಾ ಅವರಿಗೆ ಜೀವ ಬೆದರಿಕೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು.
ಹೇಗಿತ್ತು ಶಶಿಕಲಾ ದಿನಚರಿ :ಇಂದು ಮುಂಜಾನೆ 6 ಗಂಟೆಗೆ ಹಾಸಿಗೆಯಿಂದ ಎದ್ದ ಶಶಿಕಲಾ 6.30ರವರೆಗೆ ಯೋಗಾಭ್ಯಾಸ ನಡೆಸಿದರು. ಬಳಿಕ ಜೈಲಿನ ಮೆನುವಿನಂತೆ ಟೀ ಕುಡಿದು ಟೊಮೆಟೋ ಬಾತ್ ಸೇವಿಸಿದ ಅವರೀಗ ಪಳನಿಸ್ವಾಮಿ ಭೇಟಿಗೆ ಕಾದು ಕುಳಿತಿದ್ದಾರೆ.
ಪಳನಿಸ್ವಾಮಿ ಜತೆ ನಿನ್ನೆ ಅಧಿಕಾರ ಸ್ವೀಕರಿಸಿರುವ ಇತರ ಸಚಿವರು ಸಹ ಆಗಮಿಸುವ ಸಾಧ್ಯತೆಗಳಿವೆ.