Publish Date: Tue, 27 Oct 2026 (11:53 IST)
Updated Date: Tue, 27 Oct 2026 (11:56 IST)
ಕೋಲ್ಕತ್ತಾ: ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಆಕ್ರೋಶದಲ್ಲಿದ್ದ ವಿದ್ಯಾರ್ಥಿಯೊಬ್ಬ ಶಾಲೆ ಪುನರಾರಂಭಗೊಂಡ ಮೊದಲ ದಿನವೇ ಶಿಕ್ಷಕಿಯ ಮೇಲೆ ಭೀಕರವಾಗಿ ದಾಳಿ ನಡೆಸಿ, ಅವರ ಕೂದಲನ್ನು ಹಿಡಿದು ಎಳೆದು ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.
ಘಟನೆಯ ವಿವರ:
ಶಾಲೆಯ ಫಲಿತಾಂಶ ಪ್ರಕಟಗೊಂಡು, ರಜೆಯ ನಂತರ ಶಾಲೆಗಳು ಪುನರಾರಂಭಗೊಂಡಿದ್ದವು. ಪರೀಕ್ಷೆಯಲ್ಲಿ ತಾನು ಫೇಲ್ ಆಗಿದ್ದಕ್ಕೆ ಶಿಕ್ಷಕಿಯೇ ಕಾರಣ ಎಂದು ಭಾವಿಸಿದ್ದ ವಿದ್ಯಾರ್ಥಿ, ಶಾಲೆಗೆ ಶಿಕ್ಷಕಿ ಆಗಮಿಸುತ್ತಿದ್ದಂತೆಯೇ ಆಕ್ರೋಶದಿಂದ ನಿಯಂತ್ರಣ ತಪ್ಪಿದ್ದಾನೆ.
ಏಕಾಏಕಿ ಶಿಕ್ಷಕಿಯ ಬಳಿಗೆ ಧಾವಿಸಿದ ವಿದ್ಯಾರ್ಥಿ, ಅತ್ಯಂತ ಕ್ರೂರವಾಗಿ ಅವರ ಕೂದಲನ್ನು ಗಟ್ಟಿಯಾಗಿ ಹಿಡಿದು ಎಳೆದಾಡಿದ್ದಾನೆ. ಈ ದಿಢೀರ್ ದಾಳಿಯಿಂದ ದಿಗ್ಭ್ರಮೆಗೊಂಡ ಶಿಕ್ಷಕಿ ಕಿರುಚಾಡಲು ಶುರುಮಾಡಿದ್ದು, ಶಾಲಾ ಸಿಬ್ಬಂದಿ ಹಾಗೂ ಇತರ ವಿದ್ಯಾರ್ಥಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಶಿಕ್ಷಕಿಯನ್ನು ಆತನ ಹಿಡಿತದಿಂದ ಬಿಡಿಸಿದ್ದಾರೆ.
ಸಾರ್ವಜನಿಕ ಆಕ್ರೋಶ:
ಗುರುಗಳಿಗೆ ನೀಡಬೇಕಾದ ಗೌರವ ಹಾಗೂ ಶಾಲೆಯ ಆವರಣದಲ್ಲೇ ನಡೆದ ಈ ಗೂಂಡಾವರ್ತನೆಯ ದೃಶ್ಯಗಳು ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಶಾಲಾ ಆಡಳಿತ ಮಂಡಳಿಯು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಹಲ್ಲೆ ನಡೆಸಿದ ವಿದ್ಯಾರ್ಥಿಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಮುಂದಾಗಿದೆ.
ಶಿಕ್ಷಕಿಯ ಮೇಲೆ ನಡೆದ ಈ ದೌರ್ಜನ್ಯವನ್ನು ಖಂಡಿಸಿರುವ ಪೋಷಕರು ಹಾಗೂ ಶಿಕ್ಷಕ ಸಂಘಟನೆಗಳು, ಶಾಲೆಯಲ್ಲಿ ಶಿಕ್ಷಕರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ತಪ್ಪಿತಸ್ಥ ವಿದ್ಯಾರ್ಥಿ ಹಾಗೂ ಅವರ ಪೋಷಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿವೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ