ಚಂಡೀಗಢ : 34 ವರ್ಷದ ಹಿಂದಿನ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಇಂದು ಸಂಜೆ ಪಟಿಯಾಲ ನ್ಯಾಯಾಲಯಕ್ಕೆ ಕಾರಿನಲ್ಲಿ ಆಗಮಿಸಿದ ಸಿಧು ಮುಖ್ಯ ನ್ಯಾಯಾಧೀಶರ ಮುಂದೆ ಶರಣಾಗಿದ್ದಾರೆ. ಈ ಬಗ್ಗೆ ಸಿಧು ಅವರ ಮಾಧ್ಯಮ ಸಲಹೆಗಾರ ಸುರೇಂದರ್ ದಲ್ಲಾ ಪ್ರತಿಕ್ರಿಯಿಸಿ, ಪಟಿಯಾಲದ ಮುಖ್ಯ ನ್ಯಾಯಾಧೀಶರ ಮುಂದೆ ಸಿಧು ಶರಣಾಗಿದ್ದಾರೆ.
ವೈದ್ಯಕೀಯ ಪರೀಕ್ಷೆ ಮತ್ತು ಇತರ ಕಾನೂನು ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇಂದು ಬೆಳಗ್ಗೆ ನ್ಯಾಯಾಲಯದ ಮುಂದೆ ಶರಣಾಗಲು ಕೆಲವು ವಾರಗಳ ಸಮಯಬೇಕು ಎಂದು ಸಿಧು ಸುಪ್ರೀಂ ಕೋರ್ಟ್ನಲ್ಲಿ ಮನವಿ ಮಾಡಿದ್ದರು.
ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾ.ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ವಿಷಯ ಪ್ರಸ್ತಾಪಿಸಿದರು.