ಮಹೋಬಾ : ಗಂಡು ವಂಶೋದ್ದಾರಕ ಎಂಬ ನಂಬಿಕೆಯಿಂದಾಗಿ ಸಮಾಜದಲ್ಲಿ ಗಂಡು ಮಗುವಿನ ಮೇಲೆ ಜನರ ವ್ಯಾಮೋಹ ತೀವ್ರವಾಗುತ್ತಲೇ ಇದೆ.
ಅದೇ ರೀತಿ ಈಗ ಉತ್ತರಪ್ರದೇಶದ ಮಹೋಬಾದಲ್ಲಿ ಹೆಣ್ಣು ಮಕ್ಕಳನ್ನೇ ಹೆತ್ತಳು ಎಂಬ ಕಾರಣಕ್ಕೆ ಮಹಿಳೆಯನ್ನು ಆಕೆಯ ಪತಿ ಹಾಗೂ ಆತನ ಮನೆಯವರು ಅಮಾನವೀಯವಾಗಿ ಥಳಿಸಿದ್ದಾರೆ.
ತನ್ನ ಗಂಡನ ಮನೆಯವರು ಗಂಡು ಮಗುವನ್ನು ಬಯಸಿದ್ದರು. ಆದರೆ ಎರಡೂ ಮಕ್ಕಳು ಹೆಣ್ಣೇ ಆಗಿರುವುದಕ್ಕೆ ಪತಿಯ ಮನೆಯವರು ಆಗಾಗ ಕಿರುಕುಳ ನೀಡುತ್ತಲೇ ಇದ್ದಾರೆ ಎಂದು ಮಹಿಳೆ ದೂರಿದ್ದಾರೆ.
ಮೊದಲ ಮಗು ಹೆಣ್ಣು ಹುಟ್ಟಿದಾಗ ಗಂಡು ಹೆತ್ತಿಲ್ಲ ಎಂಬ ಕಾರಣಕ್ಕೆ ನನಗೆ ಆಗಾಗ ಕಿರುಕುಳ ನೀಡುತ್ತಿದ್ದರು. ಇದಾದ ಬಳಿಕ ನಾನು ಎರಡನೇ ಬಾರಿ ಗರ್ಭಿಣಿಯಾದೆ. ಆದರೆ ಎರಡನೇ ಬಾರಿಯೂ ಹೆಣ್ಣು ಮಗುವೇ ಜನಿಸಿದ್ದು, ಇದರಿಂದ ಅಸಮಾಧಾನಗೊಂಡ ನನ್ನ ಗಂಡ ಹಾಗೂ ಗಂಡನ ಮನೆಯವರು ಇತ್ತೀಚೆಗೆ ಕಿರುಕುಳ ನೀಡುವುದನ್ನು ತೀವ್ರ ಗೊಳಿಸಿದರು.
ಹಲ್ಲೆಯ ಬಳಿಕ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹೋಬಾದ ಪೊಲೀಸ್ ಸೂಪರಿಟೆಂಡೆಂಟ್ ಸುಧಾ ಸಿಂಗ್ ಹೇಳಿದ್ದಾರೆ.