ಸಮಾಜವಾದಿ ಪಕ್ಷದ ಮುಖಂಡ ಶಿವಪಾಲ್ ಯಾದವ್ ಸಚಿವ ಸ್ಥಾನಕ್ಕೆ ಮತ್ತು ಪಕ್ಷದ ಪದಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿಂದೆ ಅಮರ್ ಸಿಂಗ್ ಕೈವಾಡವಿದೆ ಎಂದು ಆರೋಪಿಸಲಾಗಿದೆ.
ಶಿವಪಾಲ್ ಯಾದವ್‌ಗೆ ಸಹೋದರ ಮುಲಾಯಂ ಸಿಂಗ್ ಬೆಂಬಲ ಸೂಚಿಸಿದ್ದರೆ, ಅಖಿಲೇಶ್ ಯಾದವ್‌ಗೆ ಮತ್ತೊಬ್ಬ ಚಿಕ್ಕಪ್ಪ ರಾಮಗೋಪಾಲ್ ಯಾದವ್ ಬೆಂಬಲ ಸೂಚಿಸಿದ್ದಾರೆ.
ಎಸ್‌ಪಿ ಮುಖ್ಯಸ್ಥ ಮುಲಾಯಂ ದೆಹಲಿಯಿಂದ ಲಖನೌಗೆ ಧಾವಿಸಿದ್ದು ಅಖಿಲೇಶ್ ಮತ್ತು ಇತರ ಮುಖಂಡರ ಜತೆ ಮಾತುಕತೆ ನಡೆಸಲಿದ್ದಾರೆ.ಅಖಿಲೇಶ್ ಅವರನ್ನು ಪಕ್ಷದ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಸ್ಥಾನದಿಂದ ತೆಗೆದದ್ದು ‘ತಪ್ಪು’ ಎಂದು ರಾಮ್ ಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದು ಉದ್ದೇಶಪೂರ್ವಕ ಅಲ್ಲ ಎಂದೂ ಅವರು ಹೇಳಿದ್ದಾರೆ.
ರಾಜ್ಯ ಘಟಕ ಅಧ್ಯಕ್ಷ ಸ್ಥಾನದಿಂದ ಅಖಿಲೇಶ್ ಅವರನ್ನು ತೆಗೆಯುವ ಮುಂಚೆ ಅವರ ಜತೆ ಚರ್ಚಿಸಬೇಕಿತ್ತು. ತಪ್ಪು ಗ್ರಹಿಕೆಯಿಂದ ಈ ಭಿನ್ನಮತ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ಭಿನ್ನಮತಕ್ಕೆ ಯಾರು ಕಾರಣ ಎಂಬ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ಮತ್ತು ಜನರಿಗೆ ಸ್ಪಷ್ಟ ತಿಳಿವಳಿಕೆ ಇದೆ ಎಂದು ರಾಮ್‌ಗೋಪಾಲ್ ಹೇಳಿದ್ದಾರೆ. ಆದರೆ ಅವರು ಅಮರ್ ಸಿಂಗ್ ಹೆಸರು ಹೇಳಿಲ್ಲ. ಅಮರ್ ಸಿಂಗ್ ಅವರನ್ನು 2010ರಲ್ಲಿ ಸಮಾಜವಾದಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಇತ್ತೀಚೆಗೆ ಅವರು ಪಕ್ಷಕ್ಕೆ ಮರಳಿದ್ದಾರೆ.
ಸಮಾಜವಾದಿ ಪಕ್ಷದ ಮುಖಂಡ ಶಿವಪಾಲ್ ಯಾದವ್ ಸಚಿವ ಸ್ಥಾನ ಮತ್ತು ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿದ ಮಾರನೇ ದಿನವೇ, ನಾನಿರುವವರೆಗೆ ಪಕ್ಷವನ್ನು ವಿಭಜಿಸಲು ಬಿಡುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಜಾಗೊಳಿಸಿದ ಸಚಿವ ಗಾಯತ್ರಿ ಪ್ರಜಾಪತಿಯನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು ಹೇಳಿದ್ದಾರೆ. ಶಿವಪಾಲ್ ಮತ್ತು ಅಖಿಲೇಶ್ ಯಾದವ್ ಮಧ್ಯೆ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪುತ್ರ ಅಖಿಲೇಶ್ ಮತ್ತು ಸಹೋದರ ಶಿವಪಾಲ್ ಯಾದವ್ ಮಧ್ಯೆ ಶಾಂತಿದೂತರಾಗಿರುವ ಮುಲಾಯಂ, ನಾನು ಬದುಕಿರುವವರೆಗೆ ಪಕ್ಷದಲ್ಲಿ ಭಿನ್ನಮತ ಉಲ್ಭಣಗೊಳ್ಳುವುದಿಲ್ಲ ಎಂದು ಗುಡುಗಿದ್ದಾರೆ.
ನಮ್ಮದು ದೊಡ್ಡ ಕುಟುಂಬ. ಸಹಜವಾಗಿಯೆ ಭಿನ್ನತೆಗಳು ಎದುರಾಗುತ್ತವೆ. ಅಖಿಲೇಶ್ ಯಾದವ್ ಮತ್ತು ಶಿವಪಾಲ್ ಯಾದವ್ ಮಧ್ಯೆ ವೈಮನಸ್ಸಿಲ್ಲ. ಅಖಿಲೇಶ್ ಶೀಘ್ರದಲ್ಲಿ ಶಿವಪಾಲ್ ಯಾದವ್‌ರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ರಾಮಗೋಪಾಲ್, ಅಖಿಲೇಶ್ ಯಾದವ್ ಮತ್ತು ಶಿವಪಾಲ್ ಮಧ್ಯೆ ಯಾವುದೇ ರೀತಿಯ ಭಿನ್ನಮತವಿಲ್ಲ. ಮಾಧ್ಯಮ ವರದಿಗಳು ಉಹಾಪೋಹವಾಗಿವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ