ಕನ್ನಡದ ಹಿರಿಯ ಸಾಹಿತಿ ಡಾಕ್ಟರ್ ಸಾ.ಶಿ ಮರುಳಯ್ಯ (85) ಇಂದು ಬೆಳಿಗ್ಗೆ 7.45 ರ ಸುಮಾರಿಗೆ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು 15 ದಿನಗಳ ಹಿಂದೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಉಸಿರು ನಿಲ್ಲಿಸಿದ್ದಾರೆ.
ಕಾವ್ಯ, ನಾಟಕ, ವಿಮರ್ಶೆ, ಸಂಶೋಧನೆ, ಪ್ರಹಸನ, ಜೀವನ ಚಿತ್ರಣ, ಕಾದಂಬರಿ, ಸಣ್ಣಕಥೆ, ಜಾನಪದ, ವ್ಯಾಕರಣ ಹೀಗೆ ಸಾಹಿತ್ಯ ಎಲ್ಲ ಪ್ರಕಾರಗಳಲ್ಲಿ ಕೈಯಾಡಿಸಿದ್ದ ಅವರು 90 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ, ಎಚ್.ನರಸಿಂಹಯ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿದ್ದವು.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಕುಗ್ರಾಮ ಸಾಸಲು ಎಂಬಲ್ಲಿ ಶಿವರುದ್ರಪ್ಪ ಮತ್ತು ಸಿದ್ದಮ್ಮ ದಂಪತಿಗಳ ಮಗನಾಗಿ 1931ರಲ್ಲಿ ಜನಿಸಿದ್ದ ಅವರು ನಾಡು ಹೆಮ್ಮೆ ಪಡುವಂತೆ ಸಾಹಿತಿಯಾಗಿ ಹೆಸರುವಾಸಿಯಾಗಿದ್ದು ಈಗ ಇತಿಹಾಸ. ಕುವೆಂಪು, ಡಿ.ಎಲ್.ಎನ್. ದೇಜಗೌರಂತಹ ಶ್ರೇಷ್ಠ ದಿಗ್ಗಜರ ಶಿಷ್ಯರಾಗಿದ್ದ ಅವರು 1956 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿಯನ್ನು ಪಡೆದಿದ್ದ ಅವರು, 1971 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ ಕುರಿತ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ. ಪದವಿಯನ್ನೂ ಪಡೆದಿದ್ದರು. ಆ ಬಳಿಕ ಪ್ರಾಧ್ಯಾಪಕರಾಗಿ ಚಾಮರಾಜನಗರದಿಂದ ವೃತ್ತಿಜೀವನವನ್ನು ಆರಂಭಿಸಿದ್ದ ಅವರು ತುಮಕೂರು, ದಾವಣಗೆರೆ, ಶಿವಮೊಗ್ಗ, ಚನ್ನಪಟ್ಟಣ, ಮಂಗಳೂರು, ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದರು.
ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಅವರು ಅಗಲಿದ್ದಾರೆ. ಅವರ ಕೊನೆಯಾಸೆಯಂತೆ ಕಣ್ಣುಗಳನ್ನು ಲಯನ್ಸ್ ಐ ಕ್ಲಬ್‌ಗೆ ನೀಡಲಾಗಿದ್ದು, ದೇಹವನ್ನು ಜೆಎಸ್ಎಸ್ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗುವುದು. ಇಂದು ಮಧ್ಯಾಹ್ನ ಅವರ ದೇಹವನ್ನು ಮೈಸೂರಿಗೆ ರವಾನಿಸಲಾಗುವುದು ಎಂದು ಪುತ್ರ ಶಿವಪ್ರಸಾದ್ ಹೇಳಿದ್ದಾರೆ. ಈ ಮೂಲಕ ಸಾಹಿತಿಗಳು ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ.