Publish Date: Tue, 13 Oct 2026 (14:32 IST)
Updated Date: Tue, 13 Oct 2026 (14:35 IST)
ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ನ ಕಚಿಗುಡ ರೈಲು ನಿಲ್ದಾಣದಲ್ಲಿ ಸಂಭವಿಸಬಹುದಿದ್ದ ಭೀಕರ ಅಪಘಾತವೊಂದು ರೈಲ್ವೆ ರಕ್ಷಣಾ ಪಡೆ ಮಹಿಳಾ ಕಾನ್ಸ್ಟೇಬಲ್ ಅವರ ಸಮಯೋಚಿತ ಎಚ್ಚರಿಕೆಯಿಂದ ತಪ್ಪಿದ ಘಟನೆ ವರದಿಯಾಗಿದೆ. ಚಲಿಸುತ್ತಿದ್ದ ವಿಶಾಖ ಎಕ್ಸ್‌ಪ್ರೆಸ್ ರೈಲನ್ನು ಹತ್ತುವ ಭರದಲ್ಲಿ ತನ್ನ ಪುಟ್ಟ ಮಗುವಿನೊಂದಿಗೆ ಕಾಲುಜಾರಿ ಹಳಿಯ ಮೇಲ್ಭಾಗಕ್ಕೆ ಬೀಳುತ್ತಿದ್ದ ವ್ಯಕ್ತಿಯೊಬ್ಬರನ್ನು ಆರ್.ಪಿ.ಎಫ್ ಕಾನ್ಸ್ಟೇಬಲ್ ಅತ್ಯಂತ ಸಾಹಸದಿಂದ ರಕ್ಷಿಸಿದ್ದಾರೆ.
ಸೋಮವಾರ ಸಂಜೆ 6 ಗಂಟೆಯ ಸುಮಾರಿಗೆ ಕಚಿಗುಡ ರೈಲು ನಿಲ್ದಾಣದಲ್ಲಿ ಈ ಘಟನೆ ಜರುಗಿದೆ. ಪ್ರಯಾಣಿಕರೊಬ್ಬರು ತನ್ನ ಕೈಯಲ್ಲಿ ಮಗುವನ್ನು ಎತ್ತಿಕೊಂಡು ಚಲಿಸುತ್ತಿದ್ದ ವಿಶಾಖ ಎಕ್ಸ್‌ಪ್ರೆಸ್ ರೈಲನ್ನು ಹತ್ತುವುದಕ್ಕೆ ಯತ್ನಿಸಿದ್ದಾರೆ. ಈ ವೇಳೆ ಏಕಾಏಕಿ ಸಮತೋಲನ ತಪ್ಪಿ ಅವರು ಮಗುವಿನೊಂದಿಗೆ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಖಾಲಿ ಜಾಗಕ್ಕೆ ಬೋಗಿಯಡಿಗೆ ಜಾರುವ ಆಪಾಯ ಎದುರಾಗಿತ್ತು.
ಕಾನ್ಸ್ಟೇಬಲ್ ರೀನಾ ಕುಮಾರಿ ಸಮಯೋಚಿತ ರಕ್ಷಣೆ
ಅದೇ ಸಮಯದಲ್ಲಿ ಕರ್ತವ್ಯದಲ್ಲಿದ್ದ ಆರ್.ಪಿ.ಎಫ್ ಕಾನ್ಸ್ಟೇಬಲ್ ರೀನಾ ಕುಮಾರಿ ಅವರು ತಕ್ಷಣವೇ ಎಚ್ಚೆತ್ತುಕೊಂಡು, ಅಪಾಯಕ್ಕೆ ಸಿಲುಕಿದ್ದ ವ್ಯಕ್ತಿಯನ್ನು ಹಾಗೂ ಆತನ ಮಗುವನ್ನು ಕ್ಷಣಮಾತ್ರದಲ್ಲಿ ಸುರಕ್ಷಿತವಾಗಿ ಹೊರಗೆಳೆದುಕೊಂಡಿದ್ದಾರೆ. ಇದೇ ವೇಳೆ ಲೋಕೋ ಪೈಲಟ್ ಕೂಡ ತಕ್ಷಣವೇ ತುರ್ತು ಬ್ರೇಕ್ ಹಾಕಿದ್ದರಿಂದ ರೈಲು ನಿಂತುಮೂಲಕ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಪ್ರಯಾಣಿಕರಿಂದ ಮತ್ತು ಸಾರ್ವಜನಿಕರಿಂದ ಪ್ರಶಂಸೆ
ನಂತರ ಆ ಕುಟುಂಬವು ಸುರಕ್ಷಿತವಾಗಿ ರೈಲನ್ನು ಹತ್ತಿ ಪ್ರಯಾಣ ಬೆಳೆಸಿದೆ. ಕರ್ತವ್ಯನಿಷ್ಠೆ ಹಾಗೂ ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾಗಿ ಜೀವ ಉಳಿಸಿದ ಕಾನ್ಸ್ಟೇಬಲ್ ರೀನಾ ಕುಮಾರಿ ಅವರ ಸಮಯೋಚಿತ ಸಾಹಸವನ್ನು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಈ ಸಂಪೂರ್ಣ ದೃಶ್ಯವು ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ