ನವದೆಹಲಿ: ಗುರುವಾರ ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶುಕ್ರವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್‌ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ಅವರು ಅಂತಿಮ ನಮನ ಸಲ್ಲಿಸಿದರು.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಸಿಂಗ್ ಅವರ ವಿಶಿಷ್ಟ ಸೇವೆ ಮತ್ತು ರಾಷ್ಟ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಯನ್ನು ಸದಾ ದೇಶ ಸ್ಮರಿಸಲಿದೆ. ಅವರು ಆರ್ಥಿಕ ಸುಧಾರಣೆಗಳು, ರಾಜಕೀಯ ಸ್ಥಿರತೆ ಮತ್ತು ಜೀವನವನ್ನು ಉನ್ನತೀಕರಿಸುವ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ ಎಂದರು.
ಭಾರತದ ಆರ್ಥಿಕ ಸುಧಾರಣೆಯ ವಾಸ್ತುಶಿಲ್ಪಿ ಮನಮೋಹನ್ ಸಿಂಗ್ ಅವರು ಗುರುವಾರ ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಸಿಂಗ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಶನಿವಾರ ನಡೆಯುವ ಸಾಧ್ಯತೆ ಇದೆ.
ಮನಮೋಹನ್ ಸಿಂಗ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಹುಲ್ ಗಾಂಧಿ ಕಂಬನಿ ಮಿಡಿದಿದ್ದರು. ನನ್ನ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ ಎಂದು ನೋವಿನಿಂದ ನುಡಿದಿದ್ದರು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಭಾಗವಹಿಸಲು ಕರ್ನಾಟಕದ ಬೆಳಗಾವಿಗೆ ರಾಹುಲ್ ಆಗಮಿಸಿದ್ದರು. ಈ ಹೊತ್ತಿನಲ್ಲೇ ಮನಮೋಹನ್ ಸಿಂಗ್ ಅವರ ನಿಧನದ ವಾರ್ತೆ ಕೇಳಿ ಕಂಬನಿ ಮಿಡಿದಿದ್ದರು.<>