ಲಕ್ನೋ: ಸೇನಾ ಸಿಬ್ಬಂದಿ ಬಗ್ಗೆ ಮಾನಹಾನಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಕೋರ್ಟ್ ಗೆ ಹಾಜರಾಗಿದ್ದಾಗ ಅವರ ಜೊತೆ ಜಡ್ಜ್ ಸೆಲ್ಫೀ ತೆಗೆದುಕೊಂಡರು ಎಂಬ ಆರೋಪ ಕೇಳಿಬಂದಿತ್ತು. ಇದರ ಸತ್ಯಾಸತ್ಯತೆ ಇಲ್ಲಿದೆ ನೋಡಿ.
ಕರಿಕೋಟು ಧರಿಸಿದ ವ್ಯಕ್ತಿ ಜೊತೆ ರಾಹುಲ್ ಗಾಂಧಿ ಹಾಗೂ ಇತರರು ಕೋರ್ಟ್ ಹಾಲ್ ನಲ್ಲೇ ಸೆಲ್ಫೀ ತೆಗೆಸಿಕೊಂಡ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನು ನೆಟ್ಟಿಗರು ಟೀಕಿಸಿದ್ದರು. ನ್ಯಾಯಾಧೀಶರೇ ಈ ರೀತಿ ಆರೋಪಿ ಸ್ಥಾನದಲ್ಲಿರುವ ವ್ಯಕ್ತಿ ಜೊತೆ ಸೆಲ್ಫೀ ತೆಗೆಸಿಕೊಳ್ಳುವ ಪರಿಸ್ಥಿತಿ ಎಂದರೆ ನ್ಯಾಯ ನಿರೀಕ್ಷಿಸಲು ಸಾಧ್ಯವೇ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ.
ಆದರೆ ಈ ಫೋಟೋ ವೈರಲ್ ಆಗುತ್ತಿದ್ದಂತೇ ಫೋಟೋ ತೆಗೆಸಿಕೊಂಡ ವ್ಯಕ್ತಿಯೇ ಸ್ಪಷ್ಟನೆ ನೀಡಿದ್ದಾರೆ. ಆ ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದು ನಾನು ಜಡ್ಜ್ ಅಲ್ಲ, ಹಿರಿಯ ವಕೀಲ ಮೊಹಮೂದ್ ಹಸನ್ ಎಂದು ನನ್ನ ಹೆಸರು. ಲಕ್ನೋ ಹೈಕೋರ್ಟ್ ನಲ್ಲಿ ಹಿರಿಯ ವಕೀಲನಾಗಿದ್ದೇನೆ. ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದು ನನಗೆ ಖುಷಿಯಾಗಿದೆ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.