ನವದೆಹಲಿ: ಸ್ಪೀಕರ್ ಆಯ್ಕೆ ವಿಚಾರದಲ್ಲಿ ವಿಪಕ್ಷಗಳ ನಿಲುವಿನ ಬಗ್ಗೆ ರಾಹುಲ್ ಗಾಂಧಿ ಇಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ವಿಪಕ್ಷ ಸಂಸದರನ್ನು ಆಡಳಿತ ಪಕ್ಷದ ನಾಯಕರು ಅವಮಾನ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದು ಸಂಸತ್ ಕಲಾಪಕ್ಕೆ ಮುನ್ನ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮೋದಿ ಎಲ್ಲಾ ವಿಪಕ್ಷಗಳೂ ಸಹಕಾರ ನೀಡಬೇಕು ಎಂದು ಬಾಯಿ ಮಾತಿನಲ್ಲಿ ಹೇಳುತ್ತಾರೆ. ಆದರೆ ವಿಪಕ್ಷಗಳ ಅಭಿಪ್ರಾಯಗಳಿಗೆ ಬೆಲೆಯೇ ಕೊಡುವುದಿಲ್ಲ. ಮೋದಿ ಹೇಳುವುದು ಒಂದು ಮಾಡುವುದು ಇನ್ನೊಂದು. ಮೊದಲು ಅವರು ಬದಲಾಗಬೇಕು ಎಂದು ಹೇಳಿದ್ದಾರೆ.
ಈ ವೇಳೆ ಸ್ಪೀಕರ್ ಆಯ್ಕೆ ವಿಚಾರದಲ್ಲಿತಮ್ಮ ನಿಲುವಿನ ಬಗ್ಗೆಯೂ ರಾಹುಲ್ ಮಾತನಾಡಿದ್ದಾರೆ. ಎಲ್ಲಾ ವಿರೋಧ ಪಕ್ಷಗಳೂ ಒಮ್ಮತದ ನಿಲುವು ಹೊಂದಿದ್ದಾರೆ. ಒಂದು ವೇಳೆ ನಮಗೆ ಉಪ ಸ್ಪೀಕರ್ ಹುದ್ದೆ ನೀಡಿದರೆ ಸ್ಪೀಕರ್ ಆಯ್ಕೆ ವಿಚಾರದಲ್ಲಿ ಯಾವುದೇ ತಕರಾರು ಮಾಡಲ್ಲ. ನಾವೂ ಸಹಕಾರ ಕೊಡುತ್ತೇವೆ. ರಾಜನಾಥ್ ಸಿಂಗ್ ನಿನ್ನೆ ಕರೆ ಮಾಡಿ ಸ್ಪೀಕರ್ ಆಯ್ಕೆಗೆ ಬೆಂಬಲ ಕೋರಿದಾಗಲೂ ಇದೇ ವಿಚಾರವನ್ನು ಹೇಳಿದ್ದೇವೆ. ಆದರೆ ಉಪ ಸ್ಪೀಕರ್ ಆಯ್ಕೆ ಬಗ್ಗೆ ಯಾವುದೇ ಭರವಸೆ ನೀಡಿಲ್ಲ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
ಈ ವಿಚಾರದಲ್ಲಿ ಇಂಡಿಯಾ ಒಕ್ಕೂಟದ ಎಲ್ಲಾ ಪಕ್ಷಗಳ ನಿಲುವು ಒಂದೇ ಆಗಿದೆ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ. ನಮ್ಮ ಅಭಿಪ್ರಾಯಗಳಿಗೆ ಬೆಲೆ ಕೊಟ್ಟರೆ ನಾವೂ ಸಹಕಾರ ಕೊಡಲಿದ್ದೇವೆ ಎಂದಿದ್ದಾರೆ.