Publish Date: Fri, 03 Apr 2026 (10:52 IST)
Updated Date: Fri, 03 Apr 2026 (10:57 IST)
ನವದೆಹಲಿ: ರಾಜ್ಯಸಭೆಯಲ್ಲಿ ಉಪ ನಾಯಕನ ಸ್ಥಾನದಿಂದ ಎಎಪಿ ತನ್ನ ಸಂಸದ ರಾಘವ್ ಚಡ್ಡಾರನ್ನು ಎಎಪಿ ತೆಗೆದು ಹಾಕಲು ಆಪ್ ಪತ್ರ ಬರೆದಿದೆ. ಇದರ ಬೆನ್ನಲ್ಲೇ ಈಗ ಸೋಷಿಯಲ್ ಮೀಡಿಯಾದಲ್ಲಿ ಇದರ ಹಿಂದಿನ ಕಾರಣ ಭಾರೀ ಚರ್ಚೆಯಾಗುತ್ತಿದೆ.
ದೊಡ್ಡ ಉದ್ಯಮ ಸಂಸ್ಥೆಗಳ ಕಾರ್ಯನಿರ್ವಹಣೆ ಬಗ್ಗೆ ರಾಘವ್ ಚಡ್ಡಾ ಸಂಸತ್ ನಲ್ಲಿ ಮಾತನಾಡುತ್ತಿದ್ದರು. ಡೆಲಿವರಿ ಬಾಯ್ ಗಳ ಕಷ್ಟದ ಬಗ್ಗೆ, ಟೆಲಿಕಾಂ ಸಂಸ್ಥೆಗಳ ವಂಚನೆ ಬಗ್ಗೆ, ವಿಮಾನ ಯಾನದ ವೇಳೆ ಲಗೇಜ್ ಶುಲ್ಕ ವಿಧಿಸುವ ಬಗ್ಗೆ ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡಿ ರಾಘವ್ ಚಡ್ಡಾ ಜನರ ಮನಗೆದ್ದಿದ್ದರು.
ಆದರೆ ಯುವ ಸಂಸದ ಈ ರೀತಿ ಮಾತನಾಡಿ ಕಾರ್ಪೋರೇಟ್ ಜಗತ್ತು ಎದುರು ಹಾಕಿಕೊಂಡಿದ್ದಕ್ಕೇ ಅವರನ್ನು ಬಲಿಕೊಟ್ಟಿರಬಹುದು ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಸಂಸತ್ ನಲ್ಲಿ ಜನರ ಪರ ಧ್ವನಿ ಎತ್ತುವವರಿಗೆ ಇದು ಕಾಲವಲ್ಲ ಎಂದಿದ್ದಾರೆ.
ಇದಲ್ಲದೆ, ರಾಘವ್ ಚಡ್ಡಾ ಮುಂದೆ ಬಿಜೆಪಿ ಸೇರಿಕೊಳ್ಳಬಹುದು ಎಂಬ ವದಂತಿಯೂ ಇದೆ. ರಾಘವ್ ಚಡ್ಡಾ ಎಎಪಿ ಸಂಸದರಾಗಿದ್ದರೂ ಇದುವರೆಗೆ ಕೇಂದ್ರ ಸರ್ಕಾರದ ವಿರುದ್ಧ ಇತರೆ ಎಎಪಿ ನಾಯಕರಂತೆ ವಾಗ್ದಾಳಿ ನಡೆಸಿಲ್ಲ. ಜನರ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆಯೇ ಹೊರತು ವೈಯಕ್ತಿಕ ಮಟ್ಟಕ್ಕಿಳಿದು ವಾಗ್ದಾಳಿ ನಡೆಸಿಲ್ಲ. ಇದೇ ಕಾರಣಕ್ಕೆ ಅವರು ಮುಂದೆ ಬಿಜೆಪಿ ಸೇರಬಹುದು ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ.