ದೇಶಾದ್ಯಂತ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶ ಚುನಾವಣಾ ಆಖಾಡ ಇಂದು ಪ್ರಿಯಾಂಕಾ ಪ್ರವೇಶದೊಂದಿಗೆ ಮತ್ತಷ್ಟು ರಂಗೇರಲಿದೆ. ಇಂದು ತಮ್ಮ ಸಹೋದರ ರಾಹುಲ್ ಗಾಂಧಿ ಜತೆಯಲ್ಲಿ ರಾಯ್‌ಬರೇಲಿಯಲ್ಲರವರು ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಕಾಂಗ್ರೆಸ್ ಮೂಲಗಳ ಪ್ರಕಾರ ರಾಹುಲ್ ಇಂದು ರಾಯ್ ಬರೇಲಿ ಮತ್ತು ಮಹರಗಂಜ್‌ನಲ್ಲಿ ಚುನಾವಣಾ ರ‍್ಯಾಲಿ ನಡೆಸಲಿದ್ದು ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲಿದ್ದಾರೆ. ಈ ಎರಡು ಕಡೆಗಳಲ್ಲಿ ಪ್ರಿಯಾಂಕಾ ಕೂಡ ರಾಹುಲ್ ಅವರಿಗೆ ಸಾಥ್ ನೀಡಲಿದ್ದಾರೆ.
ಕಾಂಗ್ರೆಸ್ ಭದ್ರಕೋಟೆಯಾಗಿರುವ ರಾಯ್ ಬರೇಲಿ ಪ್ರಿಯಾಂಕಾ- ರಾಹುಲ್ ತಾಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ಸಂಸದೀಯ ಕ್ಷೇತ್ರವಾಗಿದೆ. ಪಕ್ಕದ ಅಮೇಥಿಗೆ ರಾಹುಲ್ ಸಂಸದರಾಗಿದ್ದಾರೆ.
ಉತ್ತರ ಪ್ರದೇಶ ಚುನಾವಣಾ ಪ್ರಚಾರದಿಂದ ಸೋನಿಯಾ ದೂರ ಕಾಯ್ದುಕೊಂಡಿದ್ದಾರೆ.
ಸಮಾಜವಾದಿ -ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಉತ್ತರ ಪ್ರದೇಶದಲ್ಲಿ ಚುನಾವಣಾ ಕಣಕ್ಕಿಳಿದಿದೆ. ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಿಯಾಂಕ ಹೆಸರು ಕೂಡ ಇತ್ತು. ಆದರೆ ಮೊದಲ ಎರಡು ಹಂತದ ಚುನಾವಣಾ ಪ್ರಚಾರಕ್ಕೆ ಪ್ರಿಯಾಂಕಾ ಗೈರಾಗಿದ್ದಾರು. ಈ ಹಿನ್ನೆಲೆಯಲ್ಲಿ ಟೀಕೆಗಿಳಿದಿದ್ದ ಕೇಂದ್ರ ಸಚಿವೆ, ಬಿಜೆಪಿ ನಾಯಕ ಸ್ಮತಿ ಇರಾನಿ ಅಮೇಥಿ ಜನರ ಪ್ರಶ್ನೆಗಳಿಗೆ ಉತ್ತರಿಸಲಾಗುವುದಿಲ್ಲವೆಂದು ಪ್ರಿಯಾಂಕಾ ಪ್ರಚಾರದಿಂದ ದೂರ ಉಳಿದಿದ್ದಾರೆ ಎಂದಿದ್ದರು.
ಮತ್ತೀಗ ಪ್ರಿಯಾಂಕಾ ಪ್ರಚಾರಕ್ಕಿಳಿದಿದ್ದು ಮತದಾರರನ್ನು ಸೆಳೆಯಲು ಎಷ್ಟರ ಮಟ್ಟಿಗೆ ಯಶ ಕಾಣುತ್ತಾರೆ ಎಂಬುದನ್ನು ಕಾದು ನೋಡಬೇಕು.
ಅಮೇಥಿ ಮತ್ತು ರಾಯ್ ಬರೇಲಿ ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 23 ಮತ್ತು 27ರಂದು ಚುನಾವಣೆ ನಡೆಯಲಿದೆ.