ಪ್ರಿಯಾಂಕಾ ಗಾಂಧಿ ಕಾಗ್ರೆಸ್ ಪಕ್ಷಕ್ಕೆ ಅಗತ್ಯವಾಗಿದ್ದು, ಅವರೂ ಕೂಡ ಸೋನಿಯಾ ಅವರಂತೆಯೇ ಪ್ರಭಾವಿ ನಾಯಕರಾಗಲಿದ್ದು, ಪಕ್ಷದಲ್ಲಿ ಬದಲಾವಣೆ ತರಬಹುದಾಗಿದೆ ಎಂದು ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಎಐಸಿಸಿ ಕಚೇರಿಗೆ ಭೇಟಿ ನೀಡಿದ್ದ ಮೀರಾ ಕುಮಾರ್, ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದರು. ಈ ವೇಳೆ ಕಾಂಗ್ರೆಸ್ ಪಕ್ಷವನ್ನು ತಳಹದಿಯಿಂದ ಸಂಘಟಿಸುವ ಅಗತ್ಯವಿದ್ದು, ಪಕ್ಷಕ್ಕೆ ಪ್ರಿಯಾಂಕಾ ಗಾಂಧಿ ಅವರ ಆಗಮನ ಅನಿವಾರ್ಯವಾಗಿದೆ.
ಅಲ್ಲದೆ ಪ್ರಿಯಾಂಕಾ ಕೂಡ ಅಮ್ಮ ಸೋನಿಯಾ ಗಾಂಧಿ ಅವರಂತೆಯೇ ಪ್ರಭಾವಿಯಾಗಿದ್ದು, ಅವರನ್ನು ಪಕ್ಷವನ್ನು ಸಂಘಟಿಸಲು ಸಹಾಯವಾಗಲಿದೆ. ಅಲ್ಲದೆ ಪಕ್ಷಕ್ಕೆ ಹಿಂದಿನಿಂದ ಬರುತ್ತಿದ್ದ ಸಾಂಪ್ರಾದಾಯಿಕ ಮತಗಳೆಲ್ಲವೂ ಕೂಡ ಪಕ್ಷದ ಸುಪರ್ದಿಯಲ್ಲಿಯೇ ಉಳಿಯಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಹಿಂದೆಯೂ ಕೂಡ ಎಐಸಿಸಿ ಕಚೇರಿಯ ಮುಂದೆ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಪ್ರಿಯಾಂಕ ಗಾಂಧಿ ಅವರನ್ನು ರಾಜಕೀಯಕ್ಕೆ ಕರೆ ತರುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಉಳಿಸಿ ಎಂದು ಘೋಷಗಳನ್ನು ಮೊಳಗಿಸಿತ್ತು.