ಲಕ್ನೋ : ಲಖಿಂಪುರ ಖೇರಿಗೆ ಹೊರಟಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪೊಲೀಸರು ನಿರ್ಮಿಸಿರುವ ಗೆಸ್ಸ್ ಹೌಸ್ ನಲ್ಲಿದ್ದಾರೆ.
ಇತ್ತ ಬುಧವಾರ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಲಖಿಂಪುರ ಖೇರಿಗೆ ತೆರಳಿ ಮೃತ ರೈತ ಕುಟುಂಬಸ್ಥರಿಗೆ ಸಾಂತ್ವಾನ ಹೇಳಲಿದ್ದಾರೆ. ರಾಹುಲ್ ಗಾಂಧಿ ಐವರು ಕಾಂಗ್ರೆಸ್ ಸದಸ್ಯರ ಜೊತೆ ಮಧ್ಯಾಹ್ನ 12.30ಕ್ಕೆ ಲಕ್ನೋ ವಿಮಾನ ನಿಲ್ದಾಣ ತಲುಪಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಸೀತಾಪುರದಿಂದ ಲಖಿಂಪುರ ಖೇರಿ ತಲುಪಲಿದ್ದಾರೆ.
ಲಿಖಿಂಪುರ ಖೇರಿಗೆ ಪೊಲೀಸರು ಸರ್ಪಗಾವಲು ಹಾಕಿದ ಹಿನ್ನೆಲೆ ರಾಹುಲ್ ಗಾಂಧಿ ಮೃತ ರೈತರ ಕುಟುಂಬಸ್ಥರನ್ನು ಭೇಟಿಯಾಗೋದು ಅನುಮಾನ ಎಂದು ಹೇಳಲಾಗುತ್ತಿದೆ. ಇಂದು ಲಖೀಂಪುರ ಖೇರಿಗೆ ತೆರಳಲು ಲಕ್ನೋಗೆ ಆಗಮಿಸಿದ್ದ ಛತ್ತೀಸಗಢ ಸಿಎಂ ಭೂಪೇಶ್ ಬಾಘೇಲ್ ಅವರನ್ನು ಪೊಲೀಸರು ವಿಮಾನ ನಿಲ್ದಾಣದಲ್ಲಿ ತಡೆದಿದ್ದರು. ಪೊಲೀಸರ ನಡೆ ಖಂಡಿಸಿ ಸಿಎಂ ಭೂಪೇಶ್ ಬಾಘೇಲ್ ವಿಮಾನ ನಿಲ್ದಾಣದಲ್ಲಿಯೇ ಕುಳಿತು ಧರಣಿ ನಡೆಸಿದ್ದರು.
ವಕೀಲರನ್ನು ಭೇಟಿಯಾಗಲು ಪೊಲೀಸರು ಅವಕಾಶ ನೀಡುತ್ತಿಲ್ಲ
ಪಿಸಿ ಗೆಸ್ಟ್ ಹೌಸ್ ನಲ್ಲಿ ಬಂಧಿಯಾಗಿರುವ ಪ್ರಿಯಾಂಕಾ ಗಾಂಧಿ ಮಂಗಳವಾರ ಸಂಜೆ ಕಾರ್ಯಕರ್ತರನ್ನು ಉದ್ದೇಶಿಸಿ ಫೋನ್ ಮುಖಾಂತರ ಮಾತನಾಡಿದರು. ರೈತರಿಗಾಗಿ ನೀವೆಲ್ಲರೂ ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದೀರಿ. ರೈತರೇ ಭೂಮಿಯ ದೇವರು. ರೈತರು ಭೂಮಿಗೆ ರಕ್ತ ಹರಿಸಿ ಬೆಳೆ ಬೆಳೆಯುತ್ತಾರೆ. ಇಂದೂ ರೈತರ ಮಕ್ಕಳು ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದ್ರೆ ಈ ಸರ್ಕಾರ ಜನರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದೆ. ರೈತರನ್ನು ಭೇಟಿಯಾಗಲು ಹೊರಟ ಒಬ್ಬ ಮಹಿಳೆಯನ್ನು ಬಿಜೆಪಿ ಸರ್ಕಾರ ತಡೆದು ನಿಲ್ಲಿಸಿದೆ. ಸ್ವತಂತ್ರ ದಿನಾಚರಣೆಯ ಅಮೃತಮಹೋತ್ಸವ ಆಚರಣೆಗಾಗಿ ಲಕ್ನೋಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ರೈತರ ಕಣ್ಣೀರು ಒರೆಸಲು ಬರಲಿಲ್ಲ ಏಕೆ ಎಂದು ಖಾರವಾಗಿ ಪ್ರಶ್ನಿಸಿದರು.
ರೈತರ ಧ್ವನಿಯನ್ನು ಅಡಗಿಸಲು ಅದು ಮತ್ತಷ್ಟು ಬಲಿಷ್ಠವಾಗುತ್ತದೆ. ಘಟನೆಯ ರೂವಾರಿ ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಪುತ್ರನ ಆಶೀಶ್ ಮಿಶ್ರಾ ಬಂಧನ ಆಗೋವರೆಗೂ ನಮ್ಮ ಹೋರಾಟ ನಿಲ್ಲಲ್ಲ. ನನ್ನನ್ನು ಇಲ್ಲಿರಿಸಿ 38 ಗಂಟೆ ಕಳೆದ್ರೂ ಎಫ್ಐಆರ್ ಕಾಪಿ ನೀಡುತ್ತಿಲ್ಲ ಏಕೆ? ವಕೀಲರನ್ನು ಸಂಪರ್ಕಿಸಲು ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು. ಸೆಕ್ಸನ್ 144 ಉಲ್ಲಂಘಟನೆ ಅಡಿ ಎಫ್ಐಆರ್ ದಾಖಲಿಸಿದ್ರೂ ಪ್ರಿಯಾಂಕಾ ಗಾಂಧಿ ಅವರನ್ನು ಗೆಸ್ಟ್ ಹೌಸ್ ನಲ್ಲಿರಿಸಲಾಗಿದೆ.
ಗೆಸ್ಟ್ ಹೌಸ್ ಮುಂದೆ ಕಾಂಗ್ರೆಸ್ ಪ್ರತಿಭಟನೆ
ಪ್ರಿಯಾಂಕಾ ಗಾಂಧಿಯವರನ್ನು ಇರಿಸಲಾಗಿರುವ ಗೆಸ್ಟ್ ಹೌಸ್ ತಾತ್ಕಾಲಿಕ ಜೈಲಿನ ರೀತಿ ಬದಲಾಗಿದ್ದು, ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇತ್ತ ಗೆಸ್ಟ್ ಹೌಸ್ ಮುಂಭಾಗ ಜಮಾಯಿಸಿರುವ ಕಾಂಗ್ರೆಸ್ ಕಾರ್ಯಕರ್ತರು ಹೈಡ್ರಾಮಾವನ್ನೇ ಸೃಷ್ಟಿಸಿದ್ದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗುತ್ತಾ ಬ್ಯಾರಿಕೇಡ್ ಗಳನ್ನು ಮುರಿದು ಹಾಕಿದ್ದಾರೆ. ನಂತರ ಅಡುಗೆ ಮಾಡಲು ಸಿದ್ಧತೆ ನಡೆಸುತ್ತಿದ್ದಂತೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಲಖೀಂಪುರ ಖೇರಿ ಹಿಂಸಾಚಾರದ ಕುರಿತು ನಾಳೆ ಪಂಜಾಬ್ ಸಿಎಂ ಚರಣ್ಜಿತ್ ಸಿಂಗ್ ಸನ್ನಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ. ಇತ್ತ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು, ಪಂಜಾಬ್ ನಿಂದ ಲಖಿಂಪುರ ಖೇರಿ ಅವರಿಗೆ ಪಾದಯಾತ್ರೆ ಮಾಡುವೆ ಎಚ್ಚರಿಕೆ ನೀಡಿದ್ದಾರೆ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನೆ ಸಂಸದ ವಕ್ತಾರ ಸಂಜಯ್ ರಾವತ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.