ನವದೆಹಲಿ : ಚೀನಾ, ಯುರೋಪ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲೂ ಕೋವಿಡ್ ಏರಿಕೆ ಕಾಣುತ್ತಿದೆ.
ಇದರ ಬೆನ್ನಲ್ಲೇ 2ನೇ ಜಾಗತಿಕ ಕೋವಿಡ್ ಶೃಂಗಸಭೆ ಭಾರಿ ಮಹತ್ವ ಪಡೆದುಕೊಂಡಿದೆ. ಮೇ.12 ರಂದು ನಡೆಯಲಿರುವ 2ನೇ ಜಾಗತಿಕ ಕೋವಿಡ್ ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.
ಮೋದಿ ಭಾಗವಹಿಸುವಿಕೆಯನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಚಿತಪಡಿಸಿದೆ. ಈ ಮಹತ್ವದ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಹ್ವಾನ ನೀಡಿದ್ದಾರೆ. ಈ ಆಹ್ವಾನವನ್ನು ಮೋದಿ ಸ್ವೀಕರಿಸಿದ್ದಾರೆ ಎಂದು ಒಇಂ ಹೇಳಿದೆ.
ಕೋವಿಡ್ ಜಾಗತಿಕ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಾಂಕ್ರಾಮಿಕ ರೋಗಗಳನ್ನುತಡೆಗಟ್ಟುವುದು, ತಯಾರಿ ಹಾಗೂ ಆದ್ಯತೆ ಕುರಿತು ಮೋದಿ ಭಾಷಣ ಮಾಡಲಿದ್ದಾರೆ.
ವಿಶ್ವಕ್ಕೆ ಮಾರಕವಾಗಿ ಕಾಡುತ್ತಿರುವ ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಅಂತ್ಯಹಾಡಲು ಪ್ರತಿ ದೇಶಗಳು ಮಾಡಬಬೇಕಾದ ಕಾರ್ಯಗಳ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಕೋವಿಡ್ ಹರಡುವಿಕೆ, ರೂಪಾಂತರಿ ತಳಿಗಳ ಆತಂಕ ಸೇರಿದಂತೆ ವಿಶ್ವದಲ್ಲಿ ಕೊರೋನಾ ಆತಂಕವನ್ನು ಅಂತ್ಯಗೊಳಿಸಲು ಈ ಶೃಂಗಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ.
2021ರ ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ಜಾಗತಿಕ ಕೋವಿಡ್ ವರ್ಚುವಲ್ ಶೃಂಗಸಭೆ ಆಯೋಜಿಸಲಾಗಿತ್ತು. ಅಮೆರಿಕದಲ್ಲಿ ಆಯೋಜನೆಗೊಂಡ ಈ ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರದ ಜನರ ಆರೋಗ್ಯ, ಅಭಿವೃದ್ಧಿ, ಆರ್ಥಿಕತೆ ಸೇರಿದಂತೆ ಪ್ರತಿಯೊಂದಕ್ಕೂ ಕೋವಿಡ್ ಅಡಚಣೆಯಾಗಿದೆ. ಕೋವಿಡ್ ಇನ್ನೂ ಅಂತ್ಯಗೊಂಡಿಲ್ಲ. ಹೀಗಾಗಿ ಮುನ್ನೆಚ್ಚರಿಕೆ ಅತೀ ಅಗತ್ಯ ಎಂದು ಮೋದಿ ಹೇಳಿದ್ದರು.