ಜನತೆಯಿಂದ ಆಯ್ಕೆಯಾದ ಜನಪ್ರತಿನಿಧಿಗಳೇ ಜನರ ಮೇಲೆ ದೌರ್ಜನ್ಯ ಮೆರೆದ ಹಲವಾರು ರಾಜಕಾರಣಿಗಳನ್ನು ನಾವು ನೋಡಿದ್ದೇವೆ. ಅಂತಹ ಘಟನೆಯೊಂದು ಚತ್ತೀಸ್‌ಗಢ್‌ನ ದಂತೆವಾಡಾ ಜಿಲ್ಲೆಯಿಂದ ವರದಿಯಾಗಿದೆ.
ಅಧಿಕಾರದ ಮದದಿಂದ ಮೆರೆಯುತ್ತಿರುವ ಬಿಜೆಪಿ ಶಾಸಕನೊಬ್ಬನ ದೌರ್ಜನ್ಯ ಜಿಲ್ಲೆಯಲ್ಲಿ ಮಿತಿಮೀರಿಹೋಗಿದ್ದು ಇದೀಗ ಶಾಸಕನ ವರ್ತನೆಯ ವಿಡಿಯೋ ವೈರಲ್ ಆಗಿದೆ.
ಬಿಜೆಪಿ ಶಾಸಕ ಅಭಿಲಾಷ್ ತಿವಾರಿ, ಆದಿವಾಸಿ ಸಮುದಾಯಕ್ಕೆ ಸೇರಿದ ತರಕಾರಿ ಮಾರಾಟ ಮಾಡುವ ಮಹಿಳೆಯ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿ ವಾಗ್ದಾಳಿ ನಡೆಸಿದ್ದಲ್ಲದೇ ಆಕೆ ಮಾರಾಟ ಮಾಡುತ್ತಿದ್ದ ತರಕಾರಿಯನ್ನು ಕಾಲಿನಿಂದ ಒದೆಯುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
ನಗರದ ಗೀಡಮ್ ಬಡಾವಣೆಯ ಪ್ರದೇಶದ ಪರಿಶೀಲನೆಗೆ ತೆರಳಿದ್ದ ಶಾಸಕ ಅಭಿಲಾಷ್, ರಸ್ತೆ ಬದಿ ತರಕಾರಿ ಮಾರಾಟ ಮಾಡುತ್ತಿದ್ದ ಆದಿವಾಸಿ ಮಹಿಳೆಯರನ್ನು ಕಂಡು ಆಕ್ರೋಶದಿಂದ ತರಕಾರಿಯನ್ನು ಒದ್ದು, ಮಹಿಳೆಯ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಬಿಜೆಪಿ ಶಾಸಕನ ವಿಡಿಯೋ ಇದೀಗ ವೈರಲ್ ಆಗಿದ್ದು, ಹಲವಾರು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಭಾರಿ ಟೀಕೆಗಳು ಎದುರಾದ ಹಿನ್ನೆಲೆಯಲ್ಲಿ ಶಾಸಕ ಕ್ಷಮೆಯಾಚಿಸಿದ್ದಾನೆ. ಅಭಿಲಾಷ್ ಮಾಜಿ ಸಚಿವ ವಿಜಯ್ ತಿವಾರಿಯವರ ಪುತ್ರನಾಗಿದ್ದಾನೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ವೆಬ್‌ದುನಿಯಾ
ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.