Publish Date: Thu, 21 Apr 2016 (11:42 IST)
Updated Date: Fri, 22 Apr 2016 (11:50 IST)
ಪಶ್ಚಿಮ ಬಂಗಾಳದಲ್ಲಿ ಮೂರನೆಯ ಹಂತದ ವಿಧಾನಸಭಾ ಚುನಾವಣೆ ಆರಂಭಗೊಂಡಿದ್ದು ಭದ್ರತೆಗಾಗಿ ಒಂದು ಲಕ್ಷ ಭದ್ರತಾ ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ಮುಂಜಾನೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದ್ದು, ಕೋಲ್ಕತ್ತಾದ 7 ವಿಧಾನಸಭಾ ಕ್ಷೇತ್ರಗಳು ಸೇರಿದಂತೆ 62 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.
34 ಮಹಿಳೆಯರು ಸೇರಿದಂತೆ 418 ಅಭ್ಯರ್ಥಿಗಳು ಕಣದಲ್ಲಿದ್ದು, ಮುರ್ಷಿದಾಬಾದ್, ನಾಡಿಯಾ, ಬುರ್ವಾನ್ ಮತ್ತು ಉತ್ತರ ಕೋಲ್ಕತ್ತಾ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದೆ. 65.8 ಲಕ್ಷ ಮಹಿಳೆಯರು ಸೇರಿದಂತೆ 1.37 ಕೋಟಿ ಜನರು ಮತದಾನದ ಹಕ್ಕನ್ನು ಹೊಂದಿದ್ದಾರೆ.
16,461 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
ಇಂದು ತಮ್ಮ ಅದೃಷ್ಟವನ್ನು ಓರೆಗೆ ಹಚ್ಚುತ್ತಿರುವ ಪ್ರತಿಷ್ಠಿತ ಸ್ಪರ್ಧಿಗಳೆಂದರೆ ತೃಣಮೂಲ ಸರ್ಕಾರದ ಸಚಿವರಾದ ಶಶಿ ಪಂಜಾ, ಸಧನ್ ಪಾಂಡೆ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ, ಐದು ಬಾರಿ ಕಾಂಗ್ರೆಸ್ ಶಾಸಕರಾಗಿರುವ ಮೊಹಮದ್ ಸೋರ್ಹಬ್, ಸಿಪಿಐ-ಎಮ್ ಶಾಸಕ ಅನಿಸುರ್ ರೆಹಮಾನ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ನಜ್ರುಲ್ ಇಸ್ಲಾಮ್.