ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಯಾರ ಸಂಪರ್ಕಕ್ಕೂ ಸಿಗದಿರುವ ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರಿಗಾಗಿ ಹುಡುಕಾಟ ಆರಂಭವಾಗಿದೆ.
ಶೆಣೈ ಅವರನ್ನು ಸಂಪರ್ಕಿಸಿ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಮನವೊಲಿಸಿ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಬಳ್ಳಾರಿ ಎಸ್‌ಪಿ ಆರ್. ಚೇತನ್ ಅವರಿಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ತಂಡವನ್ನು ರಚಿಸಲಾಗಿದೆ. ಸದ್ಯ ಈ ತಂಡ ಉಡುಪಿಗೆ ತೆರಳಿದ್ದು ಸಂಬಂಧಿಕರ ಮೂಲಕ ಡಿವೈಎಸ್‌ಪಿ ಸಂಪರ್ಕಿಸಲು ಪ್ರಯತ್ನ ನಡೆಸುತ್ತಿದೆ.
4 ದಿನಗಳ ಹಿಂದೆ ವೈಯಕ್ತಿಕ ಕಾರಣ ನೀಡಿ ನಾಲ್ಕು ಸಾಲುಗಳ ರಾಜೀನಾಮೆ ಪತ್ರ ಬರೆದಿಟ್ಟು ಕಚೇರಿಯಿಂದ ನಿರ್ಗಮಿಸಿರುವ ಡಿವೈಎಸ್‌ಪಿ ಅನುಪಮಾ ಶೆಣೈ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಹಿರಿಯ ಅಧಿಕಾರಿಗಳು ಫೋನ್ ಮೂಲಕ ಅನುಪಮಾ ಶೆಣೈ ಸಂಪರ್ಕಿಸಲು ಪ್ರಯತ್ನ ಪಟ್ಟರೂ ಯಶ ಕಂಡಿಲ್ಲ. ಫೇಸ್‌ಬುಕ್‌ನಲ್ಲಿ ಅವರು ಎಕ್ಟಿವ್ ಆಗಿದ್ದರೂ ಅದು ಅವರದೇ ಖಾತೆ ಎಂಬ ಬಗ್ಗೆ ಖಚಿತತೆ ಇಲ್ಲ.
ಶಿವಮೊಗ್ಗದ ಸಂಬಂಧಿಕರ ಮನೆಯಲ್ಲಿದ್ದಾರೆ ಎಂದು ನಿನ್ನೆ ಅನುಪಮಾ ಸಂಬಂಧಿಯೊಬ್ಬರು ಮಾಹಿತಿ ನೀಡಿದ್ದರು. ಆದರೆ ಇಂದು ಅವರು ನಮ್ಮ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನುತ್ತಿದ್ದಾರೆ.