ತಮಿಳುನಾಡು: ಇಲ್ಲಿರುವ ವಿವೇಕಾನಂದ ಶಿಲಾ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಕನ್ಯಾಕುಮಾರಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಅಂತರರಾಷ್ಟ್ರೀಯ ಪ್ರವಾಸಿ ತಾಣವೂ ಆಗಿರುವ ಇಲ್ಲಿಗೆ 2,000 ಪೊಲೀಸರನ್ನು ನಿಯೋಜಿಸಲಾಗಿದೆ.
ಲೋಕಸಭಾ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತದ ಮತದಾನದ ಜೂನ್ 1ರಂದು ನಡೆಯಲಿದೆ. ಜೂನ್ 30 ಸಂಜೆಗೆ ಬಹಿರಂಗ ಮತಬೇಟೆ ಮುಕ್ತಾಯವಾಗಲಿದೆ. ಹೀಗಾಗಿ, ಮೋದಿ ಅವರು ಮೇ 30ರ ಸಂಜೆಯಿಂದ ಜೂನ್ 1ರ ಸಂಜೆಯವರೆಗೆ ಸ್ಮಾರಕದ 'ಧ್ಯಾನ ಮಂಟಪಂ'ನಲ್ಲಿ ಧ್ಯಾನ ಮಾಡಲಿದ್ದಾರೆ.
ತಿರುನಲ್ವೇಲಿ ವಲಯದ ಡಿಐಜಿ ಪ್ರವೇಶ್ ಕುಮಾರ್ ಹಾಗೂ ಕನ್ಯಾಕುಮಾರಿ ಎಸ್‌ಪಿ ಇ. ಸುಂದರವದನಂ ಅವರು ಸ್ಮಾರಕ, ಬೋಟ್‌ಗಳು ನಿಲ್ಲುವ ಸ್ಥಳ, ಹೆಲಿಪ್ಯಾಡ್ ಹಾಗೂ ಅತಿಥಿ ಗೃಹದಲ್ಲಿ ಭದ್ರತಾ ತಪಾಸಣೆ ನಡೆಸಿದ್ದಾರೆ. ಪ್ರಧಾನಿಯವರ ಭದ್ರತಾ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಪ್ರಧಾನಿ ಅವರು 45 ನಿಮಿಷ ಧ್ಯಾನ ಮಾಡಲಿದ್ದು, ಕರಾವಳಿ ಭದ್ರತಾ ಪಡೆ, ಭಾರತೀಯ ಕರಾವಳಿ ಕಾವಲುಪಡೆ ಮತ್ತು ನೌಕಾಪಡೆ ಸಾಗರ ಗಡಿಯಲ್ಲಿ ಕಣ್ಗಾವಲು ವಹಿಸಲಿದೆ. ಜೂನ್ 1ರವರೆಗೆ ಅವರು ಇಲ್ಲಿಯೇ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.<>