ನವದೆಹಲಿ: ಮೋದಿ ಮೊದಲು ಹಿಂಸಾಚಾರಕ್ಕೊಳಗಾಗಿರುವ ಮಣಿಪುರಕ್ಕೆ ಭೇಟಿ ಕೊಡಲಿ ಎಂದು ಕಾಂಗ್ರೆಸ್ ನಾಯಕರು ಇಷ್ಟು ದಿನ ಸವಾಲು ಹಾಕುತ್ತಲೇ ಇದ್ದರು. ಇಂದು ಪ್ರಧಾನಿ ಮೋದಿ ಕೊನೆಗೂ ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ.
2023 ರಿಂದ ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ಸಂಘರ್ಷ ನಡೆಯುತ್ತಲೇ ಇತ್ತು. ಇತ್ತೀಚೆಗಷ್ಟೇ ಇಲ್ಲಿ ಪರಿಸ್ಥಿತಿ ತಕ್ಕಮಟ್ಟಿಗೆ ಸುಧಾರಣೆಯಾಗಿತ್ತು. ಮಣಿಪುರದ ಪರಿಸ್ಥಿತಿ ವಿಪಕ್ಷಗಳಿಗೆ ಕೇಂದ್ರದ ವಿರುದ್ಧ ಟೀಕಾ ಪ್ರಹಾರ ನಡೆಸಲು ಒಂದು ಅಸ್ತ್ರವಾಗಿತ್ತು.
ಅದರಲ್ಲೂ ಇದುವರೆಗೆ ಪ್ರಧಾನಿ ಮೋದಿ ಇಲ್ಲಿಗೆ ಭೇಟಿ ನೀಡಿಲ್ಲ ಎಂಬುದನ್ನೇ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡುತ್ತಲೇ ಇದ್ದರು. ದೇಶದ ಬೇರೆ ಎಲ್ಲಾ ಕಡೆ ಹೋಗಲು ಮೋದಿಗೆ ಸಮಯವಿದೆ. ಆದರೆ ಹಿಂಸಾಚಾರಕ್ಕೊಳಗಾದ ಮಣಿಪುರಕ್ಕೆ ಭೇಟಿ ನೀಡಲು ಸಮಯವಿಲ್ಲ ಎನ್ನುತ್ತಿದ್ದರು.
ಇದೀಗ ಕೊನೆಗೂ ಮೋದಿ ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಇಂದು ಮಣಿಪುರಕ್ಕೆ ಭೇಟಿ ನೀಡಲಿರುವ ಮೋದಿ ಸಾವಿರಾರು ಕೋಟಿ ರೂ.ಗಳ ಯೋಜನೆಗೂ ಚಾಲನೆ ನೀಡಲಿದ್ದಾರೆ. ಈ ಮೂಲಕ ವಿಪಕ್ಷಗಳ ಟೀಕೆಗಳನ್ನು ಬಂದ್ ಮಾಡುವ ಪ್ರಯತ್ನ ಮಾಡಲಿದ್ದಾರೆ.