ಪ್ರಧಾನಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟವನ್ನು ಪುನಾರಚಿಸಲಿದ್ದು, ಅಸಮರ್ಥ ಸಚಿವರನ್ನು ಕೈ ಬಿಟ್ಟು ಹೊಸ ಮುಖಗಳಿಗೆ ಮಣೆಹಾಕಲಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ, ಶೀಘ್ರದಲ್ಲಿಯೇ ಮೋದಿ ಸಂಪುಟ ಪುನಾರಚನೆಯಾಗಲಿದೆ. ಸಂಪುಟ ಪುನಾರಚನೆಯ ಬಗ್ಗೆ ದಿನಾಂಕ ನಿಗದಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡು ವರ್ಷಗಳ ಅಧಿಕಾರವಧಿ ಪೂರ್ಣಗೊಳಿಸಿದ ಸಂದರ್ಭದಲ್ಲಿ ಸಂಪುಟ ಪುನಾರಚನೆಯ ಸುದ್ದಿ ಬಹಿರಂಗವಾಗಿರುವುದು ಸಚಿವರಲ್ಲಿ ತಳಮಳ ಮೂಡಿಸಿದೆ.
ಪಕ್ಷದ ವರದಿಗಳ ಪ್ರಕಾರ, ಮೋದಿ ಸರಕಾರದಲ್ಲಿ ಅಸಮರ್ಥರಾಗಿರುವ ಸಚಿವರಿಗೆ ಕೊಕ್ ನೀಡಿ ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಬಹುತೇಕ ಮುಂಬರುವ ಜೂನ್ ತಿಂಗಳ ಮೊದಲ ವಾರದಲ್ಲಿ ಸಚಿವ ಸಂಪುಟ ಪುನಾರಚನೆಯಾಗಲಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ಸರ್ಬಾನಂದ್ ಸೋನೋವಾಲ್ ಆಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿದ್ದರಿಂದ ಅವರು ನಿರ್ವಹಿಸುತ್ತಿದ್ದ ಕ್ರೀಡಾ ಸಚಿವ ಸ್ಥಾನ ಪ್ರಸ್ತುತ ಖಾಲಿಯಾಗಿ ಉಳಿದಿದೆ. ಕ್ರೀಡಾ ಸಚಿವ ಸ್ಥಾನಕ್ಕೆ ಸೂಕ್ತರು ಯಾರು ಎನ್ನುವ ಬಗ್ಗೆ ಮೋದಿ ಸರಕಾರ ಚಿಂತನೆ ನಡೆಸಿದೆ.
ಹಿರಿಯ ಬಿಜೆಪಿ ನಾಯಕರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಮತ್ತು ನಿತೀನ್ ಗಡ್ಕರಿ ತಮ್ಮ ಖಾತೆಗಳಲ್ಲಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ.
ಅಸಮರ್ಥ ಸಚಿವರಿಂದಾಗಿ ಕೆಲ ಕಾರ್ಯಗಳು ನೆನೆಗುದಿಗೆ ಬಿದ್ದಿದ್ದರಿಂದ ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡಿ ವೇಗದ ಚಾಲನೆ ನೀಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವೆಬ್‌ದುನಿಯಾ
ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.