ವಾರಣಾಸಿ: ಲೋಕಸಭೆ ಚುನಾವಣೆ 2024 ರಲ್ಲಿ ವಾರಣಾಸಿಯಲ್ಲಿ ಮತ್ತೊಮ್ಮೆ ಸ್ಪರ್ಧೆಗಿಳಿದಿರುವ ಪ್ರಧಾನಿ ಮೋದಿ ಇಂದು ಶುಭ ಮುಹೂರ್ತ ನೋಡಿಕೊಂಡು ನಾಮಪತ್ರ ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಮೊದಲು ಪ್ರಧಾನಿ ಮೋದಿ ನಿನ್ನೆ ಸ್ವಕ್ಷೇತ್ರದಲ್ಲಿ ಬೃಹತ್ ರೋಡ್ ಶೋ ನಡೆಸಿದ್ದಾರೆ. ಕಳೆದ ಬಾರಿಯೂ ಮೋದಿ ನಾಮಪತ್ರ ಸಲ್ಲಿಕೆ ವೇಳೆ ರೋಡ್ ಶೋ ನಡೆಸಿದ್ದರು. ಕಳೆದ ಎರಡೂ ಬಾರಿ ಮೋದಿ ವಾರಣಾಸಿಯಲ್ಲಿ ದಾಖಲೆಯ ಅಂತರದಿಂದ ಗೆಲುವು ದಾಖಲಿಸಿದ್ದರು.
ಇದೀಗ ಮತ್ತೊಮ್ಮೆ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಮೋದಿ ನಾಮಪತ್ರ ಸಲ್ಲಿಕೆಗೆ ಮೊದಲು ನಡೆಯುವ ರೋಡ್ ಶೋ ನಡುವೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದಿವೆ. ಮೋದಿ ರೋಡ್ ಶೋಗಾಗಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಸುಮಾರು 5 ಕಿ.ಮೀ. ರೋಡ್ ಶೋ ನಡೆಸಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದ್ದರು. ಈ ವೇಳೆ ಮೋದಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡಾ ಸಾಥ್ ನೀಡಿದ್ದರು.
ಇಂದು 11.40 ರ ಅಭಿಜಿನ್ ಮುಹೂರ್ತದಲ್ಲಿ ಮೋದಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ವೇಳೆಯೂ ಯೋಗಿ ಆದಿತ್ಯನಾಥ್ ಅವರಿಗೆ ಸಾಥ್ ನೀಡುವ ನಿರೀಕ್ಷೆಯಿದೆ. ನಿನ್ನೆ ರಾತ್ರಿ ಮೋದಿ ವಾರಣಾಸಿಯಲ್ಲೇ ತಂಗಿದ್ದರು. ಇಂದು ನಾಮಪತ್ರ ಸಲ್ಲಿಕೆಗೆ ಮೊದಲು ಕಾಶಿವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಮೋದಿ ಸತತ ಮೂರನೇ ಬಾರಿಗೆ ಪ್ರಧಾನಿಯಾಗುವ ವಿಶ್ವಾಸದಲ್ಲಿದ್ದಾರೆ.