ನವದೆಹಲಿ: ದಲಿತ ಮುಖಂಡನನ್ನು ರಾಷ್ಟ್ರಪತಿ ಅಭ್ಯರ್ಥಿಯ ಘೋಷಣೆ ಮಾಡುವುದರೊಂದಿಗೆ ವಿಪಕ್ಷಗಳ ಅರಿವಿಗೂ ಬರದಂತೆ ಒಂದೇ ಕಲ್ಲಿಗೆ ಎರಡು ಹಕ್ಕಿಯನ್ನು ಹೊಡೆದುರುಳಿಸಿದರೇ ಪ್ರಧಾನಿ ಮೋದಿ?
ಇಂದಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಅದು ನಿಜವೆನಿಸುತ್ತದೆ. ದಲಿತ ಮುಖಂಡನನ್ನು ಆರಿಸಿದ ಕಾರಣ ಪ್ರತಿಪಕ್ಷಗಳಿಗೆ ವಿರೋಧಿಸುವಂತೆಯೂ ಇಲ್ಲ. ಬೆಂಬಲಿಸಿದರೆ ಪ್ರತಿಷ್ಠೆಯ ಪ್ರಶ್ನೆ.
ಅತ್ತ ಪ್ರಧಾನಿ ಮೋದಿ ನಾಯಕತ್ವಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ನೇತೃತ್ವದಲ್ಲಿ ದೇಶದ ಸಣ್ಣ ಪುಟ್ಟ ಪಕ್ಷಗಳೆಲ್ಲಾ ಒಂದಾಗಿ ಮಹಾಘಟಬಂಧನವೊಂದು ಏರ್ಪಡುತ್ತಿತ್ತು. ಇದೀಗ ರಾಷ್ಟ್ರಪತಿ ಚುನಾವಣೆ ನೆಪದಲ್ಲಿ ಪ್ರಧಾನಿ ಮೋದಿ ಆ ಘಟಬಂಧನವನ್ನು ಒಡೆದೇ ಬಿಟ್ಟರು ಎನ್ನಬಹುದು.
ಕಾಂಗ್ರೆಸ್ ರಮಾನಾಥ್ ಕೋವಿಂದ್ ರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದೆ. ಆದರೆ ಇಷ್ಟು ದಿನ ಆ ಪಕ್ಷದ ಜತೆಗಿದ್ದ ಜೆಡಿಯು ಕೂಡಾ ಸದ್ದಿಲ್ಲದೆ ಕೈಕೊಡುತ್ತಿದೆ. ಇದರಿಂದ ಬಿಹಾರದಲ್ಲಿ ಆರ್ ಜೆಡಿ ಮತ್ತು ಜೆಡಿಯು ಮಧ್ಯೆ ಒಡಕು ಮೂಡಲಿದೆ ಎಂದು ವಿಶ್ಲೇಷಿಸಲಾಗಿದೆ.
ಇದು ಕಾಂಗ್ರೆಸ್ ಗೆ ನಿಜಕ್ಕೂ ನುಂಗಲಾರದ ತುತ್ತಾಗಿದೆ. ಹೀಗೆ ವಿರೋಧ ಪಕ್ಷಗಳೆಲ್ಲಾ ಒಂದಾಗಿ ದೊಡ್ಡ ಶಕ್ತಿಯಾಗಿ ರೂಪುಗೊಳ್ಳುವ ಮೊದಲೇ ಪ್ರಧಾನಿ ಮೋದಿ ರಾಷ್ಟ್ರಪತಿ ಚುನಾವಣೆ ಎಂಬ ಗಾಳ ಹಾಕಿ ಬಂಧನವನ್ನೇ ಮುರಿದಿದ್ದಾರೆ. ಇದೀಗ ವಿರೋಧ ಪಕ್ಷಗಳ ಒಗ್ಗಟ್ಟೆಲ್ಲಾ ಮೂಲೆಗುಂಪಾಗಿದೆ.
ಅತ್ತ ಕಾಂಗ್ರೆಸ್ ಗೆ ಇದೀಗ ಆರ್ ಜೆಡಿ, ತೃಣಮೂಲ ಕಾಂಗ್ರೆಸ್, ಸಿಪಿಐಎಂ ಪಕ್ಷಗಳ ಬಲವಿದೆ. ಬಿಜೆಪಿ ದಲಿತ ಮುಖಂಡನನ್ನು ಆರಿಸಿದ್ದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡಾ ದಲಿತ ಮುಖಂಡನಿಗಾಗಿ ಹುಡುಕಾಟ ಆರಂಭಿಸಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಬಿಆರ್ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಹೆಸರೂ ಕೇಳಿಬರುತ್ತಿದೆ. ಆದರೂ ಇದೀಗ ಎನ್ ಡಿಎ ಅಭ್ಯರ್ಥಿಗೆ ಹೆಚ್ಚಿನ ಬೆಂಬಲ ಸಿಗುತ್ತಿರುವುದು ಕಾಂಗ್ರೆಸ್ ಚಿಂತೆಗೆ ಕಾರಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ