ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ಇಂದು 74 ನೇ ಜನ್ಮದಿನದ ಸಂಭ್ರಮ. ಮೋದಿ ಜನ್ಮದಿನ ನಿಮಿತ್ತ ಬಿಜೆಪಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮೋದಿ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಸಂಗತಿಗಳು ಇಲ್ಲಿವೆ.
1950 ರಲ್ಲಿ ವಡ್ನಾಗರ್ ನಲ್ಲಿ ಜನಿಸಿದ ಮೋದಿ ಆರ್ ಎಸ್ಎಸ್ ಕಾರ್ಯಕರ್ತನಾಗಿ ತಳಮಟ್ಟದಿಂದಲೇ ಬೆಳೆದು ಇಂದು ಪ್ರಧಾನಿಯಾಗಿ ಮೂರನೇ ಬಾರಿಗೆ ಅಧಿಕಾರಕ್ಕೇರಿ ದಾಖಲೆ ಮಾಡಿದವರು. ಮೋದಿಗೆ ಚಿಕ್ಕ ವಯಸ್ಸಿನಲ್ಲಿ ಸಾಧು ಆಗುವ ಬಯಕೆಯಿತ್ತಂತೆ. ಅದಕ್ಕೆ ಅವರು ಮದುವೆಯಾಗಿದ್ದರೂ ತಮ್ಮ ಪತ್ನಿಯಿಂದ ದೂರವೇ ಇದ್ದರು.
ಮೋದಿ ಶೈಕ್ಷಣಿಕವಾಗಿ ರಾಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಾಧು ಸಂತರ ಮೇಲೆ ವಿಶೇಷ ಭಕ್ತಿ, ಮಮತೆ ಹೊಂದಿದ್ದ ಮೋದಿ ಅನೇಕ ಸಾಧು ಸಂತರನ್ನು ಭೇಟಿ ಮಾಡುತ್ತಿದ್ದರು. ಸನ್ಯಾಸಿ ಆಗುವ ಬಯಕೆಯಿಂದ ಉಪ್ಪು, ಮೆಣಸು, ಸಿಹಿಯನ್ನು ತ್ಯಾಗ ಮಾಡಿದ್ದರು. 18 ನೇ ವಯಸ್ಸಿಗೆ ಅವರಿಗೆ ಮದುವೆಯಾಗಿತ್ತು. ತಮ್ಮ 20 ರ ಹರೆಯಲ್ಲಿ ಕವಿತೆಗಳನ್ನು ಬರೆಯುತ್ತಿದ್ದರು. ಕೇವಲ ಕವಿತೆ ಮಾತ್ರವಲ್ಲ, ನಾಟಕಗಳಲ್ಲೂ ಅಭಿನಯಿಸುತ್ತಿದ್ದರು.
ಮೋದಿ ಎಷ್ಟು ಧೈರ್ಯವಂತ ಎಂದರೆ ಚಿಕ್ಕಂದಿನಲ್ಲಿ ಒಮ್ಮೆ ಮೊಸಳೆ ಮರಿಯನ್ನು ಮನೆಗೇ ತಂದಿದ್ದರಂತೆ. ಮೋದಿ ಹಿಂದಿನಿಂದಲೂ ತುಂಬಾ ಕಡಿಮೆ ನಿದ್ದೆ ಮಾಡುತ್ತಾರೆ. ವಿದೇಶ ಪ್ರವಾಸ ಸಂದರ್ಭಗಳಲ್ಲಿಯೂ ಹೆಚ್ಚಿನ ಸಮಯ ವಿಮಾನದಲ್ಲೇ ನಿದ್ರೆ ಮಾಡುತ್ತಾರೆ. ಸಾಕಷ್ಟು ಓದುವ ಹವ್ಯಾಸವಿಟ್ಟುಕೊಂಡಿರುವ ಮೋದಿ ಹೆಚ್ಚು ಸಮಯವನ್ನು ಗ್ರಂಥಾಲಯದಲ್ಲೇ ಕಳೆಯುತ್ತಿದ್ದರು. ಇಂದಿರಾ ಗಾಂಧಿ ಬಳಿಕ ಅತ್ಯಂತ ಜನಪ್ರಿಯ ಪ್ರಧಾನಿ ಎಂಬ ಹೆಗ್ಗಳಿಕೆ ಪಡೆದವರು ಪ್ರಧಾನಿ ಮೋದಿ.