ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವದಲ್ಲಿಯೇ ಬೃಹತ್ ಪೂರ್ವ ಸಿದ್ದತೆಯಿಲ್ಲದ ಆರ್ಥಿಕ ಪ್ರಯೋಗ ಮಾಡಿ ದೇಶವನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿಯ ನೋಟ್ ಬ್ಯಾನ್ ಬಹುದೊಡ್ಡ ಹಗರಣವಾಗಿದ್ದು, ಜೆಪಿಸಿ ತನಿಖೆಯಾಗಬೇಕು ಎಂದು ಎಲ್ಲಾ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಆದರೆ, ಮೋದಿ ಲೋಕಸಭೆಗೆ ಆಗಮಿಸುವ ಧೈರ್ಯ ತೋರುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇಂದು ಬೆಳಿಗ್ಗೆ ಸಂಸತ್ತಿನ ಆವರಣದಲ್ಲಿ ಪ್ರತಿಪಕ್ಷಗಳ ಸುಮಾರು 200 ಸಂಸದರು ಮಾನವ ಸರಪಳಿಯನ್ನು ನಿರ್ಮಿಸಿ ಸರಕಾರದ ವಿರುದ್ಧ ಪ್ರತಿಭಟನೆ ತೋರಿದ್ದಾರೆ. ಪ್ರಧಾನಿ ಮೋದಿ ಯಾಕೆ ಇಂತಹ ನಿರ್ಧಾರ ತೆಗೆದುಕೊಂಡರು ಮತ್ತು ನೋಟ್ ಬ್ಯಾನ್ ಮಾಹಿತಿಯನ್ನು ತಮ್ಮ ಉದ್ಯಮಪತಿಗಳಿಗೆ, ಬಿಜೆಪಿ ಮುಖಂಡರಿಗೆ ಯಾಕೆಸೋರಿಕೆ ಮಾಡಿದರು ಎನ್ನುವ ಬಗ್ಗೆ ಸಂಸತ್ತಿನಲ್ಲಿ ಉತ್ತರಿಸಲೇಬೇಕು ಎಂದು ಒತ್ತಾಯಿಸಿದರು.
ಮೋದಿ, ಹಣಕಾಸು ಸಚಿವ ಅರುಣ್ ಜೇಟ್ಲಿ, ಮುಖ್ಯ ಆರ್ಥಿಕ ಸಲಹೆಗಾರ ಸೇರಿದಂತೆ ಯಾರೊಬ್ಬರ ಸಲಹೆ ಕೂಡಾ ಪಡೆಯದೆ ವಿಶ್ವದಲ್ಲಿಯೇ ಬೃಹತ್ ಪೂರ್ವ ಸಿದ್ದತೆಯಿಲ್ಲದ ಆರ್ಥಿಕ ಪ್ರಯೋಗ ಮಾಡಿದ್ದಾರೆ ಎಂದು ಕಿಡಿಕಾರಿದರು.
ಪ್ರಧಾನಮಂತ್ರಿ ನೃತ್ಯ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಲು ಸಮಯವಿರುತ್ತದೆ. 200 ಸಂಸದರು ಮೋದಿ ಸಂಸತ್ತಿಗೆ ಬಂದು ಹೇಳಿಕೆ ನೀಡಲಿ ಎಂದು ಒತ್ತಾಯಿಸಿದರೆ ಸಂಸತ್ತಿಗೆ ಬರಲು ಮೋದಿಗೆ ಸಮಯವಿಲ್ಲ. ಮೋದಿ ಸಂಸತ್ತಿಗೆ ಬರಲು ಯಾಕೆ ಹೆದರುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ, ಟಿಎಂಸಿ, ಡಿಎಂಕೆ, ಸಿಪಿಎಲ್, ಸಿಪಿಐ(ಎಂ) ಪಕ್ಷಗಳಿಗೆ ಸೇರಿದ 200 ಸಂಸದರು ಸಂಸತ್ತಿನಲ್ಲಿರುವ ಗಾಂಧಿ ಪ್ರತಿಮೆ ಬಳಿ ನೋಟು ನಿಷೇಧ ವಿರೋಧಿಸಿ ಪ್ರತಿಭಟನೆ ನಡೆಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.