ಅನಂತನಾಗ್ (ಜಮ್ಮು ಮತ್ತು ಕಾಶ್ಮೀರ): ಪಹಲ್ಗಾಮ್‌ನಲ್ಲಿ ನಡೆದ ದಾಳಿ ವೇಳೆ ಪ್ರವಾಸಿಗರನ್ನು ರಕ್ಷಿಸಲು ಹೋಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಸೈಯದ್ ಆದಿಲ್ ಹುಸೇನ್ ಶಾ ಅವರ ತಂದೆ ಹೈದರ್ ಶಾ, ತನ್ನ ಮಗನ ವೀರ ಮರಣದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಎಎನ್‌ಐ ಜೊತೆ ಮಾತನಾಡಿದ ಹೈದರ್ ಶಾ, ತನ್ನ ಮಗನನ್ನು ಕಳೆದುಕೊಂಡ ದುಃಖದ ಹೊರತಾಗಿಯೂ, ಆದಿಲ್‌ನ ಶೌರ್ಯದಿಂದ ಶಕ್ತಿಯನ್ನು ಪಡೆದುಕೊಂಡಿದ್ದೇನೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ನನ್ನ ಮಗ ಮತ್ತು ಸೋದರಸಂಬಂಧಿ ಆಸ್ಪತ್ರೆಯಲ್ಲಿದ್ದಾರೆ ಎಂದು ನಮಗೆ ಸಂಜೆ 6 ಗಂಟೆ ಸುಮಾರಿಗೆ ತಿಳಿಯಿತು. ಅವನನ್ನು ಹುಡುಕಲು ಹೋದ ಜನರು ಘಟನೆಯ ಬಗ್ಗೆ ನನಗೆ ತಿಳಿಸಿದರು.
"ನನಗೆ ಅವನ ಮತ್ತು ಅವನ ಶಹಾದತ್ (ತ್ಯಾಗ) ಬಗ್ಗೆ ಹೆಮ್ಮೆ ಇದೆ. ಆ ಹೆಮ್ಮೆಯಿಂದ ನಾನು ಜೀವಂತವಾಗಿರುವುದು. ಇಲ್ಲದಿದ್ದರೆ ಅವನ ನಿರ್ಜೀವ ದೇಹವನ್ನು ನೋಡಿದ ತಕ್ಷಣ ನಾನು ಕೊನೆಯುಸಿರೆಳೆಯುತ್ತಿದೆ ಎಂದು ಹೇಳಿದರು.
ದಾಳಿಯ ಬಳಿಕ ನಾವು ಆದಿಲ್ ನಂಬರ್‌ಗೆ ಕರೆ ಮಾಡಿದೆವು. ಆದರೆ ಆತ ಸಂಪರ್ಕಕ್ಕೆ ಸಿಲುಕಲಿಲ್ಲ. ನಾವು ಆತ ನೆಟ್‌ವರ್ಕ್ ಕ್ಷೇತ್ರದಲ್ಲಿಲ್ಲ ಎಂದು ಭಾವಿಸಿದೆವು. ಆದರೆ ಕೆಲವು ಗಂಟೆಗಳ ಬಳಿಕ ಕಠೋರವಾದ ಸುದ್ದಿಯನ್ನು ಕೇಳಬೇಕಾಯಿತು ಎಂದು ಘಟನೆಯನ್ನು ವಿವರಿಸಿದರು.
ಯುವ ಪೋನಿ ಹ್ಯಾಂಡ್ಲರ್ ಸೈಯದ್ ಆದಿಲ್ ಹುಸೇನ್ ಷಾ ಅವರ ತಾಯಿ ಕೂಡ ಎಎನ್‌ಐ ಜೊತೆ ತೀವ್ರ ದುಃಖದಲ್ಲಿ ಮಾತನಾಡಿದ್ದಾರೆ, ಮನೆಗೆ ಆಧಾರ ಸ್ತಂಭವಾಗಿದ್ದ ತಮ್ಮ ಹಿರಿಯ ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದೇವೆ. ನಮಗೆ ನ್ಯಾಯ ಬೇಕೆಂದು ಮನವಿ ಮಾಡಿದರು.